ಬೆಳ್ತಂಗಡಿ(ದ.ಕ):ಧರ್ಮಸ್ಥಳದಲ್ಲಿ ರಜತಾದ್ರಿ ವಸತಿ ಗೃಹದಲ್ಲಿರುವ ಕೊರೊನಾ ಆರೈಕೆ ಕೇಂದ್ರ 300 ಕೊಠಡಿಗಳನ್ನು ಹೊಂದಿದೆ. 600 ಹಾಸಿಗೆಗಳಿರುವ ವಸತಿಗೃಹವನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕೊರೊನಾ ಆರೈಕೆ ಕೇಂದ್ರಕ್ಕಾಗಿ ಉಚಿತವಾಗಿ ನೀಡಿದ್ದರು.
ನೆರಿಯಾ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಕೊರೊನಾ ಸೋಂಕಿತರಾದ 120 ಪುರುಷರು ಹಾಗೂ 86 ಮಹಿಳೆಯರು ಸೇರಿದಂತೆ ಒಟ್ಟು 206 ಮಂದಿ ಧರ್ಮಸ್ಥಳದ ಕೊರೊನಾ ಆರೈಕೆ ಕೇಂದ್ರದಲ್ಲಿ ಶುಶ್ರೂಷೆ ಪಡೆದು ಸಂಪೂರ್ಣ ಗುಣಮುಖರಾಗಿ ಸೋಮವಾರ ಸಿಯೋನ್ ಆಶ್ರಮಕ್ಕೆ ಮರಳುವರು. 206 ಮಂದಿ ಸೋಂಕಿತರಲ್ಲಿ 10 ಮಂದಿ ವಿಕಲ ಚೇತನರು, 30 ಮಂದಿ ಎಪ್ಪತ್ತು ವರ್ಷಕ್ಕೂ ಮಿಕ್ಕಿದ ಹಿರಿಯ ನಾಗರಿಕರು ಹಾಗೂ ಕೆಲವರು ಬುದ್ಧಿಮಾಂದ್ಯರೂ ಇದ್ದಾರೆ.
ಕೇಂದ್ರದಲ್ಲಿರುವ ವೈದ್ಯರು, ದಾದಿಯರು, ನೌಕರರು, ಸ್ವಯಂಸೇವಕರು ಹಾಗೂ ಸಿಬ್ಬಂದಿಯ ಸೌಜನ್ಯ ಪೂರ್ಣ ಸೇವೆಯಿಂದ ಸೋಂಕಿತರಲ್ಲಿ ಭಯ ಆತಂಕ ನಿವಾರಣೆಯಾಗಿದ್ದು ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಿದೆ. ಪ್ರತಿದಿನ ಬೆಳಿಗ್ಗೆ ಉಪಾಹಾರ, 11 ಗಂಟೆಗೆ ಕಷಾಯ ಮತ್ತು ಬಿಸ್ಕೆಟ್, ಮಧ್ಯಾಹ್ನ ಊಟ, ಸಂಜೆ ಕಾಫಿ, ಟೀ, ಕಷಾಯ, ತಿಂಡಿ ಹಾಗೂ ರಾತ್ರಿ ಊಟ ಮತ್ತು ಊಟ ಮಾಡದವರಿಗೆ ಉಪಹಾರವನ್ನು ಧರ್ಮಸ್ಥಳದ ವತಿಯಿಂದ ಒದಗಿಸಲಾಗಿದೆ.