ಮಂಗಳೂರು : ಜನರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರುತ್ತಿರುವುದರಿಂದ ಜಾಗೃತಿ ಮೂಡಿಸಲು ಇಂದು ಸ್ವತಃ ದ.ಕ. ಜಿಲ್ಲಾಧಿಕಾರಿಯೇ ಫೀಲ್ಡಿಗಿಳಿದ್ದರು.
ಕೋವಿಡ್ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಮಾ.15ರಂದು ಮತ್ತೆ ಹೊಸ ಮಾರ್ಗಸೂಚಿ ಹೊರಡಿಸಿದ್ದರೂ ಜನತೆ ಇನ್ನೂ ಎಚ್ಚೆತ್ತಿಲ್ಲ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಓಡಾಡ್ತಿದ್ದಾರೆ.
ಇದರಿಂದ ಬೇಸತ್ತ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ಮಾಲ್, ಮಾರ್ಕೆಟ್, ಬಸ್ ನಿಲ್ದಾಣ ಸೇರಿ ನಗರದ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸಿ ಜನರಿಗೆ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿಯ ದಿಢೀರ್ ಕಾರ್ಯಾಚರಣೆಯಿಂದ ಮಾಸ್ಕ್ ಧರಿಸದವರು ಗಲಿಬಿಲಿಗೊಂಡರು. ಈ ಸಂದರ್ಭ ಮಾಸ್ಕ್ ಧರಿಸಿದ ಸಾರ್ವಜನಿಕರಿಂದ ಸ್ಥಳದಲ್ಲಿಯೇ ದಂಡ ವಸೂಲಿ ಕೂಡ ಮಾಡಲಾಯಿತು.
ಕೋವಿಡ್ ಜಾಗೃತಿ ಮೂಡಿಸಲು ಫೀಲ್ಡಿಗಿಳಿದ ದ.ಕ ಜಿಲ್ಲಾಧಿಕಾರಿ ಏಪ್ರಿಲ್ನಿಂದ ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ :ದಕ್ಷಿಣ ಕನ್ನಡ ಜಿಲ್ಲೆಯ ಕೇರಳ ಗಡಿಯಲ್ಲಿ ಆರ್ಟಿಪಿಸಿಆರ್ ವರದಿಗಳನ್ನು ಪರಿಶೀಲಿಸಿ ಜಿಲ್ಲೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಸ್ಥಳದಲ್ಲಿ ಗಂಟಲು ದ್ರವ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಆರ್ಥಿಕ ವರ್ಷ ಕೊನೆಗೊಳ್ಳುವ ಕಾರಣದಿಂದ ಗಡಿ ಪ್ರದೇಶದ ತಪಾಸಣೆಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆಗೊಳಿಸಲು ಸಾಧ್ಯವಾಗಿಲ್ಲ. ಏಪ್ರಿಲ್ನಿಂದ ಅವರು ಗಡಿಯಲ್ಲಿ ತಪಾಸಣೆ ಕಾರ್ಯದಲ್ಲಿ ತೊಡಗಲಿದ್ದಾರೆ. ಆ ಬಳಿಕ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದರು.
ಕೇರಳ ಗಡಿಯಲ್ಲಿ ಕರ್ತವ್ಯಕ್ಕೆ ಎಸ್ಟಿಆರ್ಎಫ್ ತಂಡ ಬಳಕೆ :ಮಂಗಳೂರಿನಲ್ಲಿ ಮೊಕ್ಕಾಂ ಹೂಡಿರುವ ಎಸ್ಟಿಆರ್ಎಫ್ ತಂಡದಲ್ಲಿ 23 ಮಂದಿ ಸದಸ್ಯರಿದ್ದು, ಕೇರಳ ಗಡಿಭಾಗದಲ್ಲಿ ಇವರನ್ನು ಕರ್ತವ್ಯಕ್ಕೆ ನಿಯೋಜಿಸುವ ಚಿಂತನೆ ಇದೆ. ಇದಕ್ಕಾಗಿ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅವರಿಂದ ಅನುಮತಿ ಸಿಕ್ಕಿದ ಬಳಿಕ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದರು.
ಕೊರೊನಾ 2ನೇ ಅಲೆ ಹಿನ್ನೆಲೆ ಮಾರ್ಚ್ 23ರಂದು ದಕ್ಷಿಣ ಕನ್ನಡ ಜಿಲ್ಲೆಯ 228 ಗ್ರಾಪಂಗಳು, 279 ವಾರ್ಡ್ಗಳಲ್ಲಿ ಏಕಕಾಲದಲ್ಲಿ ಒಂದು ಗಂಟೆ ಜನಜಾಗೃತಿ ಕಾರ್ಯಕ್ರಮ ಜರುಗಲಿದೆ. ಈ ಒಂದು ಗಂಟೆ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಕಡೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆ, ಸಮಾರಂಭಗಳಲ್ಲಿ ದೈಹಿಕ ಅಂತರ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.