ಮಂಗಳೂರು:ಇಲ್ಲಿನ ಮಳಲಿ ಮಸೀದಿ ವಿವಾದ ಇನ್ನೂ ಮುಂದುವರೆದಿದ್ದು, ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಈ ಸಂಬಂಧದ ಆದೇಶವನ್ನು ಮತ್ತೆ ಮುಂದೂಡಿದೆ. ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿ ಕಲಾಪವನ್ನು ನ.9ಕ್ಕೆ ಮುಂದೂಡಿದೆ.
ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿಯ ನವೀಕರಣ ಕಾಮಗಾರಿ ಸಂದರ್ಭದಲ್ಲಿ ಹಿಂದೂ ಶೈಲಿಯ ದೇವಾಲಯ ಪತ್ತೆಯಾಗಿತ್ತು. ಬಳಿಕ ವಿ ಹೆಚ್ ಪಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಮಸೀದಿ ಆಡಳಿತ ಮಂಡಳಿ ಅರ್ಜಿ ಹಾಕಿ, ಈ ವಿಚಾರ ವಕ್ಫ್ ಟ್ರಿಬ್ಯುನಲ್ಗೆ ಬರುವುದೆಂದು ವಾದಿಸಿತ್ತು. ಈ ಬಗ್ಗೆ ವಾದ- ವಿವಾದ ಆಲಿಸಿದ ನ್ಯಾಯಾಲಯ ತೀರ್ಪು ಇಂದು ಪ್ರಕಟಿಸಬೇಕಿತ್ತು. ಆದರೆ ಇಂದು ಮಂಗಳೂರು ಸಿವಿಲ್ ಕೋರ್ಟ್ ತೀರ್ಪನ್ನು ನವೆಂಬರ್ 9 ಕ್ಕೆ ಮುಂದೂಡಿಕೆ ಮಾಡಿದೆ.
ಈ ವಿಚಾರದಲ್ಲಿ ಮೂರನೇ ಬಾರಿ ನ್ಯಾಯಾಲಯದ ತೀರ್ಪು ಮುಂದೂಡಿಕೆಯಾಗಿದೆ. 2022ರ ಎಪ್ರಿಲ್ನಲ್ಲಿ ಮಳಲಿ ಮಸೀದಿ ನವೀಕರಣದ ವೇಳೆ ಕಟ್ಟಡ ಕೆಡವಿದ ಸಂದರ್ಭ ಹಿಂದೂ ಶೈಲಿಯ ಮರದ ಕೆತ್ತನೆ ಪತ್ತೆಯಾಗಿತ್ತು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.