ಮಂಗಳೂರು: ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದು ಸೈನೈಡ್ ನೀಡಿ ಹತ್ಯೆ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಸೈನೈಡ್ ಮೋಹನ್‌ಗೆ ನಾಲ್ಕನೇ ಬಾರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಬಂಟ್ವಾಳ ತಾಲೂಕಿನ ಗ್ರಾಮವೊಂದರ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಸೈನೈಡ್ ನೀಡಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಸೈನೈಡ್ ಮೋಹನ್ (56)ಗೆ ಇಂದು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಅ. 22ರಂದು ಈ ಯುವತಿಯ ಕೊಲೆ ಮಾಡಿದ್ದ ಪ್ರಕರಣದ ಆರೋಪ ಸಾಬೀತಾಗಿತ್ತು. ಶಿಕ್ಷೆಯ ಪ್ರಮಾಣದ ಘೋಷಣೆಯನ್ನು ಅ. 24ಕ್ಕೆ ನಿಗದಿ ಪಡಿಸಲಾಗಿತ್ತು. ಶಿಕ್ಷೆಯ ಬಗ್ಗೆ ವಾದ ಮತ್ತು ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ಕೊಲೆ ಅಪರಾಧಕ್ಕಾಗಿ ಐಪಿಸಿ 302 ಸೆಕ್ಷನ್ ಪ್ರಕಾರ ಆರೋಪಿ ಮೋಹನ್‌ಗೆ ಮರಣ ದಂಡನೆ ಶಿಕ್ಷೆ ವಿಧಿಸಿದ್ದಾರೆ.
ಕೊಲೆ ಆರೋಪ, ಅಪಹರಣ, ಅತ್ಯಾಚಾರ, ವಿಷ ಪದಾರ್ಥ ಉಣಿಸಿದ ಆರೋಪ, ಚಿನ್ನಾಭರಣ ಸುಲಿಗೆ ಆರೋಪ, ವಿಷ ಉಣಿಸಿ ಸುಲಿಗೆ ಮಾಡಿದ ಆರೋಪ, ನಂಬಿಸಿ ವಂಚಿಸಿದ ಆರೋಪ, ಸಾಕ್ಷ್ಯ ನಾಶ ಹೀಗೆ ಎಲ್ಲಾ ಶಿಕ್ಷೆಗಳನ್ನು ಏಕ ಕಾಲದಲ್ಲಿ ಅನುಭವಿಸಬೇಕು ಹಾಗೂ ಮರಣ ದಂಡನೆ ಶಿಕ್ಷೆಯನ್ನು ಹೈಕೋರ್ಟ್ ದೃಢೀಕರಿಸಿದರೆ ಈ ಶಿಕ್ಷೆಯಲ್ಲಿ ಉಳಿದೆಲ್ಲ ಶಿಕ್ಷೆಗಳನ್ನು ಅಂತರ್ಗತ ಮಾಡಬೇಕು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ವಿವರಿಸಿದೆ.
ಕೊಲೆಯಾದ ಯುವತಿಗೆ ಓರ್ವ ತಂಗಿ ಮಾತ್ರ ಇದ್ದು, ಆಕೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸರ್ಕಾರ ಪರಿಹಾರವನ್ನು ಕೂಡಾ ನೀಡಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಇದು ಸೈನೈಡ್ ಮೋಹನ್‌ನ 17ನೇ ಪ್ರಕರಣವಾಗಿದ್ದು, ಇನ್ನೂ ಮೂರು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಜಿಲ್ಲಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದ 4ನೇ ಪ್ರಕರಣ ಇದಾಗಿದೆ.