ಮಂಗಳೂರು :ತನ್ನದೇ ಪಿಸ್ತೂಲ್ನಿಂದ ಹಾರಿದ ಗುಂಡಿಗೆ ಮಗ ಬಲಿಯಾದ ಪ್ರಕರಣದ ಆರೋಪಿ ರಾಜೇಶ್ ಪ್ರಭು ಅವರಿಗೆ ಮಗನ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ನ್ಯಾಯಾಲಯ ಅವಕಾಶ ನೀಡಿದೆ.
ಕೆಲ ದಿನಗಳ ಹಿಂದೆ ಮಂಗಳೂರಿನ ವೈಷ್ಣವಿ ಕಾರ್ಗೋ ಪ್ರೈ. ಲಿಮಿಟೆಡ್ ಮಾಲೀಕ ರಾಜೇಶ್ ಪ್ರಭು ತನ್ನ ಕೈಯಲ್ಲಿದ್ದ ಪಿಸ್ತೂಲ್ನಿಂದ ಹಾರಿಸಿದ ಗುಂಡು ಅವರ ಮಗ ಸುಧೀಂದ್ರ(16)ನ ತಲೆಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಮಗನ ಮೆದುಳು ನಿಷ್ಕ್ರೀಯಗೊಂಡು ಇಂದು ಮುಂಜಾನೆ ಆತ ಸಾವನ್ನಪ್ಪಿದ್ದಾನೆ.
ಇದರ ಮಧ್ಯೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದ ರಾಜೇಶ್ ಪ್ರಭುವನ್ನು ನಿನ್ನೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ಆರೋಪಿ ಪರ ವಕೀಲರು ರಾಜೇಶ್ ಪ್ರಭು ಅವರ ಮಗನ ಸ್ಥಿತಿ ಗಂಭೀರವಾಗಿದೆ. ಒಂದು ವೇಳೆ ಸಾವು ಸಂಭವಿಸಿದರೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ನ್ಯಾಯಾಲಯ ಅವಕಾಶ ನೀಡಬೇಕೆಂದು ಕೇಳಿದ್ದರು.