ಮಂಗಳೂರು:ಇಂದಿನ ಕಾಲದಲ್ಲಿ ಅಂಗೈ ಅಗಲ ಜಾಗ ಸಿಕ್ಕರೂ ಅದನ್ನು ಲಾಭದ ದೃಷ್ಟಿಯಿಂದಲೇ ಕಾಣುವರೇ ಹೆಚ್ಚು. ಇಂತವರ ನಡುವೆ ಇಲ್ಲೊಂದು ಕುಟುಂಬ ತಮ್ಮ 2 ಎಕರೆ ಜಾಗವನ್ನು ಪ್ರಾಣಿ ಪಕ್ಷಿಗಳಿಗೆ ಅಂತಲೇ ಮೀಸಲಿಟ್ಟು ಮಾದರಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾವಿನಕಟ್ಟೆಯ ಎಲಿಯಾನಗೂಡು ಗ್ರಾಮದ ನಿತ್ಯಾನಂದ ಶೆಟ್ಟಿ ಹಾಗೂ ರಮ್ಯಾ ನಿತ್ಯಾನಂದ ಶೆಟ್ಟಿ ದಂಪತಿ ಪಕ್ಷಿಗಳ ಉಳಿವಿಗೆ ಪಣತೊಟ್ಟಿದ್ದಾರೆ. ತಮ್ಮ ಸ್ವಂತ ಹೆಸರಿನಲ್ಲಿದ್ದ ಎರಡು ಎಕರೆ ಜಾಗವನ್ನು ಪಕ್ಷಿಗಳಿಗಾಗಿ ಮೀಸಲಿಟ್ಟಿದ್ದಾರೆ. ಈ ಎರಡು ಎಕರೆ ಭೂಮಿಯಲ್ಲಿ ಗಿಡ-ಮರಗಳನ್ನು ಬೆಳೆಸಿ ಪಕ್ಷಿಗಳ ವಾಸಕ್ಕೆ ಬಿಟ್ಟಿದ್ದಾರೆ.
ಪಕ್ಷಿ ಸಂಕುಲ ಉಳಿಸಲು 2 ಎಕರೆ ಜಾಗ ಮುಡುಪಿಟ್ಟ ಪಕ್ಷಿ ಪ್ರೇಮಿ ದಂಪತಿ ಈ ಎರಡು ಎಕರೆ ಜಾಗದಲ್ಲಿ ಪಕ್ಷಿಗಳಿಗಾಗಿ ಆಹಾರ ನೀಡುವ ದೃಷ್ಟಿಯಿಂದ ವಿವಿಧ ಫಲ ನೀಡುವ ಮರಗಳು, ನೀರಿಗಾಗಿ ಮಡಿಕೆ ಹಾಗೂ ಪಕ್ಷಿಗಳಿಗೆ ನೆರವಾಗಲು ಗೂಡುಗಳನ್ನು ನಿರ್ಮಿಸಿದ್ದಾರೆ. ಈ ಪಕ್ಷಿಗಳಿಗೆ ಬೇಕಾದ ಗೂಡುಗಳ ನಿರ್ಮಾಣದಲ್ಲಿ ಪತ್ನಿ ರಮ್ಯಾ ಕೈಜೋಡಿಸುತ್ತಾರೆ. ಅಲ್ಲದೆ ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನ ಆರಂಭಿಸಿ ಶಾಲೆಗಳಿಗೆ ತೆರಳಿ ಪಕ್ಷಿಗಳ ಬಗ್ಗೆ ಮಕ್ಕಳಲ್ಲಿ ಹಾಗೂ ಸುತ್ತಲಿನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಪಕ್ಷಿ ಸಂಕುಲ ಉಳಿಸಲು 2 ಎಕರೆ ಜಾಗ ಮುಡುಪಿಟ್ಟ ಪಕ್ಷಿ ಪ್ರೇಮಿ ದಂಪತಿ ಹೀಗಾಗಿ ಈ 2 ಎಕರೆ ಜಾಗದಲ್ಲೀಗ ನಿರ್ಭೀತಿಯಿಂದ ಪಕ್ಷಿಗಳು ಹಾರಾಡಿಕೊಂಡಿದ್ದು, ಎಲ್ಲಿ ನೋಡಿದರು ಹಕ್ಕಿಗಳ ಚಿಲಿಪಿಲಿ ಕಿವಿಗೆ ಬೀಳುತ್ತದೆ.
ನಗರೀಕರಣ ಬೆಳೆದ ಹಿನ್ನೆಲೆ ಪಕ್ಷಿಗಳಿಗೆ ಗೂಡು, ಆಹಾರ ದೊರಕುವುದು ಕಷ್ಟವಾಗುತ್ತಿದೆ. ಈ ದೃಷ್ಟಿಯಿಂದ ನೆರವಾಗಲು ದಂಪತಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ನಿತ್ಯಾನಂದ ಶೆಟ್ಟಿ, ನಮ್ಮ ಸುತ್ತಲಿನ ಪಕ್ಷಿಗಳನ್ನು ರಕ್ಷಿಸಬೇಕು, ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಅವು ವಲಸೆ ಹೋಗಬಾರದು ಎಂಬ ಉದ್ದೇಶದಿಂದ 2 ಎಕರೆ ಜಾಗದಲ್ಲಿ ಅವುಗಳಿಗೆ ಆವಾಸಸ್ಥಾನ ಕಲ್ಪಿಸಿದ್ದೇನೆ. ಮರ-ಗಿಡಗಳ ನೆಟ್ಟು, ಅವುಗಳಿಗೆ ನೀರು ಹಾಕಿ ಪೋಷಿಸಿದ್ದೇವೆ. ಸುತ್ತಮುತ್ತಲು ಮಣ್ಣಿನ ಗೂಡು, ಬಿದಿರಿನಿಂದ ಹಾಗೂ ರಟ್ಟುಗಳಿಂದ ಮಾಡಲಾದ ಗೂಡು ಇಡಲಾಗಿದೆ ಎಂದು ವಿವರಿಸಿದರು.
ಈ ಬಗ್ಗೆ ಮಾತನಾಡಿದ ರಮ್ಯಾ ನಿತ್ಯಾನಂದ ಶೆಟ್ಟಿ, ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಹೀಗಾಗಿ ಗುಬ್ಬಚ್ಚಿ ಗೂಡು ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ. 205 ಶಾಲೆಗಳಿಗೆ ಭೇಟಿ ನೀಡಿ ಗುಬ್ಬಚ್ಚಿ ಗೂಡು ಅಭಿಯಾನ ಮಾಡಿದ್ದೇವೆ. ನಾವು ಹೋದಲೆಲ್ಲಾ ಪಕ್ಷಿ ಸಂರಕ್ಷಣೆಯ ಮಾಹಿತಿ ನೀಡುವುದು ಖುಷಿ ಕೊಡುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಗಿನ್ನಿಸ್ ದಾಖಲೆ: ವಿಶ್ವದ ಅತಿ ಎತ್ತರದ ಮಹಿಳೆ ಇವರೇ ನೋಡಿ..