ಮಂಗಳೂರು: ವ್ಯಕ್ತಿಯೋರ್ವ ತಮಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ನಗರ ಪೊಲೀಸ್ ಕಮಿಷನರ್ಗೆ ಕರೆ ಮಾಡಿ ಹೆಂಡತಿ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸುರತ್ಕಲ್ನ ಚಿತ್ರಾಪುರದ ರಹೆಜಾ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಇವರ ಪರೀಕ್ಷಾ ವರದಿ ಬಂದಿದ್ದು, ನೆಗೆಟಿವ್ ಆಗಿದೆ. ಆದರೆ, ಇವರು ಇದೇ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಮೇಶ್ ಕುಮಾರ್ ಮತ್ತು ಗುಣ ಎಂಬ ದಂಪತಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ರಮೇಶ್ ಕುಮಾರ್ ಮುಂಜಾನೆ 6 ಗಂಟೆ ಸುಮಾರಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಕರೆ ಮಾಡಿ ನಾವಿಬ್ಬರೂ ಕೊರೊನಾ ಪೀಡಿತರಾಗಿದ್ದೇವೆ. ನನ್ನ ಹೆಂಡತಿ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದೀಗ ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಮ್ಮ ಅಂತ್ಯಸಂಸ್ಕಾರ ಮಾಡಿ ಎಂದು ಮನವಿ ಮಾಡಿದ್ದರು. ಕೂಡಲೇ ಪೊಲೀಸ್ ಕಮಿಷನರ್ ಆತನಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿರಲಿಲ್ಲ. ಆದರೆ, ಪೊಲೀಸ್ ಕಮಿಷನರ್ ಆತನ ಜೀವ ಉಳಿಸಲು ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದರಲ್ಲದೆ, ಪೊಲೀಸ್ ಇಲಾಖೆಯ ಮೂಲಕವೂ ಆತನ ಪತ್ತೆಗೆ ಪ್ರಯತ್ನಿಸಿದ್ದಾರೆ.
ಕೊನೆಗೆ ಆತನ ನಿವಾಸ ಪತ್ತೆಯಾದರೂ, ಅಷ್ಟರಲ್ಲಿ ಇಬ್ಬರು ನೇಣಿಗೆ ಶರಣಾಗಿದ್ದರು. ಪತ್ನಿ ಬರೆದ ಡೆತ್ ನೋಟ್ ಮನೆಯಲ್ಲಿ ದೊರೆತಿದೆ. ನನಗೆ ಬ್ಲಾಕ್ ಫಂಗಸ್ ಲಕ್ಷಣಗಳಿವೆ. ಇದರಿಂದ ಮುಂದೆ ತೊಂದರೆಯಾಗಲಿದೆ. ಪತಿಗೂ ಕೋವಿಡ್ ಲಕ್ಷಣಗಳಿವೆ. ಹೀಗಾಗಿ, ನಾವು ಸಾಯಲು ನಿರ್ಧರಿಸಿದ್ದೇವೆ ಎಂದು ಬರೆದಿದ್ದಾರೆ.
ಆಪ್ತರಿಗೆ ಪತಿ ರಮೇಶ್ ಕುಮಾರ್ ಕಳುಹಿಸಿದ ವಾಯ್ಸ್ ಮೆಸೇಜ್ :ರಮೇಶ್ ಕುಮಾರ್ ತನ್ನ ಆಪ್ತರಿಗೆ ಕಳುಹಿಸಿದ ವಾಯ್ಸ್ ಮೆಸೇಜ್ಗಳು ಪೊಲೀಸರಿಗೆ ಸಿಕ್ಕಿವೆ. ಇದರಲ್ಲಿ ‘ತನ್ನ ಹೆಂಡತಿ ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿದ್ದಾಳೆ. ನಾವಿಬ್ಬರೂ ಸಾಯಲು ನಿರ್ಧರಿಸಿದ್ದೇವೆ. ಹೆಂಡತಿ 40ಕ್ಕೂ ಅಧಿಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರೂ ಆಗಲಿಲ್ಲ.
ಕೊನೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿಯೂ ಫ್ಯಾನ್ನಿಂದ ಬಟ್ಟೆ ತುಂಡಾಗಿ ಆಕೆ ಬಿದ್ದಳು. ಆಕೆ ಇದೀಗ ಸಾವನ್ನಪ್ಪಿದ್ದು, ನಾನೂ ಸಾಯುತ್ತಿದ್ದೇನೆ. ನನ್ನ ತಂದೆ-ತಾಯಿಯನ್ನು ಜಾಗೃತೆಯಿಂದ ನೋಡಿಕೊಳ್ಳಿ. ಮನೆಯಲ್ಲಿ 1 ಲಕ್ಷ ರೂಪಾಯಿ ಇದ್ದು, ಅದನ್ನು ಅಂತ್ಯಸಂಸ್ಕಾರಕ್ಕೆ ಬಳಸಿಕೊಳ್ಳಿ. ಮನೆಯಲ್ಲಿರುವ ಸಾಮಗ್ರಿಗಳನ್ನು ಮಾರಿ ಬಡವರಿಗೆ ಹಂಚಿ ಎಂದು ತಿಳಿಸಿದ್ದಾರೆ.
ಕೋವಿಡ್ ಪಾಸಿಟಿವ್ ಆಗುತ್ತೆ ಎಂಬ ಭಯದಿಂದ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ಇವರ ವರದಿ ಮಾತ್ರ ನೆಗೆಟಿವ್ ಬಂದಿವೆ. ಕೊರೊನಾ ಭಯದಿಂದ ಇವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.