ಮಂಗಳೂರು:ಪಚ್ಚನಾಡಿ ಡಂಪಿಂಗ್ ಯಾರ್ಡ್ ಹಾಗೂ ಯುಜಿಡಿ ವಿಚಾರದಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್ ಅಭಿವೃದ್ಧಿಗಾಗಿ ಬಳಕೆ ಮಾಡದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಬೇರೆ ಉದ್ದೇಶಗಳಿಗೆ ಬಳಸಿದೆ. ಅದೇ ಇಂದಿನ ಮಂದಾರ ಪ್ರದೇಶದ ದುರಂತಕ್ಕೆ ಕಾರಣ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ.ಭರತ್ ಶೆಟ್ಟಿ ಆರೋಪಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಡಂಪಿಂಗ್ ಯಾರ್ಡ್ನಲ್ಲಿ ಸಮಸ್ಯೆಗಳಿವೆ. ಮುಂದೆ ದುರಂತ ಆಗುವ ಸಂಭವವಿದೆ. ಆದ್ದರಿಂದ ಶೀಘ್ರ ತಡೆಗೋಡೆ ನಿರ್ಮಾಣ ಆಗಬೇಕೆಂದು ಆರೋಗ್ಯ ವಿಭಾಗ ವರದಿ ಕೊಟ್ಟಿದ್ದರೂ ಅದನ್ನು ನಿರ್ಲಕ್ಷ್ಯ ಮಾಡಿದ ಮ.ನ.ಪಾ ಕಾಂಗ್ರೆಸ್ ಸರ್ಕಾರವೇ ಈ ದುರಂತಕ್ಕೆ ಸಂಪೂರ್ಣ ಕಾರಣ ಎಂದು ದೂರಿದರು.