ಕಡಬ:ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು ತಾಲೂಕುಗಳಲ್ಲಿ ದಿನಂಪ್ರತಿ ವಿದ್ಯುತ್ ಸಮಸ್ಯೆ ಬಿಗಡಾಯಿಸುತ್ತಿದ್ದು, ಈ ಫೆಬ್ರವರಿ 25 ರ ಒಳಗಡೆ ಸಮಸ್ಯೆ ಸರಪಡಿಸದೇ ಇದ್ದಲ್ಲಿ ಕಡಬ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನೀತಿ ಟ್ರಸ್ಟ್ ಸಾಮಾಜಿಕ ಸಂಘಟನೆಯ ವತಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ನೀತಿ ಸಾಮಾಜಿಕ ಸಂಘಟನೆಯಿಂದ ಮೆಸ್ಕಾಂಗೆ ಮನವಿ ಈ ಬಗ್ಗೆ ಮಾತನಾಡಿದ ನೀತಿ ಸಾಮಾಜಿಕ ಸಂಘಟನೆಯ ರಾಜ್ಯಾಧ್ಯಕ್ಷ ಜಯನ್, ಈ ಹಿಂದೆಯೇ ನಾವು ಮೆಸ್ಕಾಂಗೆ ಹಲವು ಬಾರಿ ವಿದ್ಯುತ್ ಕಡಿತದಿಂದಾಗುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿದ್ದೇವೆ. ಕಳೆದ ವರ್ಷ ಡಿಸೆಂಬರ್ ಒಳಗಡೆ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂಬ ಭರವಸೆಯನ್ನು ಮೆಸ್ಕಾಂ ಅಧಿಕಾರಿಗಳು ನೀಡಿದ್ದರು. ಇದಾಗಿ ಎರಡು ತಿಂಗಳು ಕಳೆದರೂ ಈ ತನಕ ಈ ಸಮಸ್ಯೆ ಕಡೆಗೆ ಮೆಸ್ಕಾಂ ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನೀತಿ ಸಾಮಾಜಿಕ ಸಂಘಟನೆಯ ರಾಜ್ಯಾಧ್ಯಕ್ಷ ಜಯನ್ ದಿನಂಪ್ರತಿ ಶಾಲಾ ಮಕ್ಕಳು,ವಿವಿಧ ಉದ್ಯಮಗಳು, ಹೋಟೆಲ್ ನಡೆಸುವವರು, ವಿದ್ಯುತ್ ಆಧಾರಿತ ಯಂತ್ರೋಪಕರಣಗಳಲ್ಲಿ ಕೆಲಸ ಮಾಡುವವರು, ಕೃಷಿಕರು ತೊಂದರೆ ಅನುಭವಿಸುವಂತಾಗಿದೆ. ಕೆಲಸಗಳು ಇಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯುತ್ ಕಡಿತ ಈ ಸಮಸ್ಯೆಯನ್ನು ದ್ವಿಗುಣಗೊಳಿಸಿದೆ. ಮಾತ್ರವಲ್ಲದೆ ಬೆಳಗ್ಗೆ ರಾತ್ರಿ ಎನ್ನದೇ ಏಕಾಏಕಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಮತ್ತು ಪ್ರತೀ ವಾರದಲ್ಲಿ ಎರಡು ಅಥವಾ ಮೂರು ದಿನಗಳು ಪೂರ್ತಿಯಾಗಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳ,ಕೃಷಿಕರ, ಸಾರ್ವಜನಿಕರ ಸಂಕಷ್ಟವನ್ನು ಮೆಸ್ಕಾಂ ಅಧಿಕಾರಿಗಳು ಅರ್ಥಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಕೂಡಲೇ ಮೆಸ್ಕಾಂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ಇದೇ 25-02-2020 ರಂದು ಮೊದಲು ಕಡಬ ಮೆಸ್ಕಾಂ ಕಚೇರಿಗೆ ನಂತರ ಪುತ್ತೂರು ಕಚೇರಿಗೆ ಸಾರ್ವಜನಿಕರ ಸಹಕಾರದೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂಬ ಎಚ್ಚರಿಕೆ ನೀಡಿದರು.