ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಆರ್ಭಟ ಮುಂದುವರೆದಿದ್ದು, ಇಂದು ಇಬ್ಬರು ಅಪ್ರಾಪ್ತರು ಸೇರಿ 17 ಜನರಲ್ಲಿ ಸೋಂಕು ದೃಢಗೊಂಡಿದೆ.
ಮಹಾರಾಷ್ಟ್ರದಿಂದ ಬಂದ 16 ಮಂದಿಗೆ ಹಾಗೂ ಗೋವಾದಿಂದ ಬಂದ ಓರ್ವನಲ್ಲಿ ಸೋಂಕು ದೃಢಪಟ್ಟಿದೆ. ಇವರಲ್ಲಿ 17 ಹಾಗೂ 14 ವರ್ಷದ ಇಬ್ಬರು ಅಪ್ರಾಪ್ತ ಬಾಲಕರು, ಇಬ್ಬರು ಮಹಿಳೆಯರು ಹಾಗೂ 13 ಮಂದಿ ಗಂಡಸರಲ್ಲಿ ಸೋಂಕು ಕಾಣಿಸಿಕೊಂಡಿದೆ.
ನೆರೆ ರಾಜ್ಯಗಳಿಂದ ಬಂದಿದ್ದ ಇವರನ್ನು ಕ್ವಾರೆಂಟೈನ್ ನಲ್ಲಿ ಇರಿಸಲಾಗಿತ್ತು. ಬಳಿಕ ಎಲ್ಲರ ಗಂಟಲು ದ್ರವವನ್ನು ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ಇಂದು ಇವರಲ್ಲಿ ಸೋಂಕು ದೃಢಗೊಂಡ ಬಗ್ಗೆ ವರದಿ ಬಂದಿದೆ. ಪರಿಣಾಮ ಇವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 192 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 88 ಮಂದಿ ಗುಣಮುಖರಾಗಿದ್ದಾರೆ. 7 ಮಂದಿ ಸಾವನ್ನಪ್ಪಿದ್ದು, 97 ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.