ಮಂಗಳೂರು:ತುಳಸಿ ಮಾಲಾಧಾರಣೆಯಿಂದ ದೇಹದಲ್ಲಿ ನವಚೈತನ್ಯ ಮೂಡುತ್ತದೆ. ಹಸು, ಗಂಗಾಜಲ ಮನೆಯಲ್ಲಿದ್ದರೆ ಕೊರೊನಾದಂಥ ರೋಗಗಳು ಹತ್ತಿರ ಸುಳಿಯುವುದಿಲ್ಲ ಎಂದು ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದರು.
ತುಳಸಿ, ಹಸು, ಗಂಗಾಜಲವಿದ್ದರೆ ಕೊರೊನಾದಂಥ ರೋಗಭೀತಿ ದೂರ: ಪ್ರಜ್ಞಾ ಸಿಂಗ್ - MP Sadhvi Pragya Singh
ಹಿಂದು ಸಮಾಜೋತ್ಸವ ಕಾರ್ಯಕ್ರಮದ ಹಿನ್ನೆಲೆ ಮಂಗಳೂರಿಗೆ ಆಗಮಿಸಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಹಸು, ಗಂಗಾಜಲ, ತುಳಸಿಯ ಮಹತ್ವವನ್ನು ತಿಳಿಸಿಕೊಟ್ಟರು.
ಇಂದು ವಿಟ್ಲದಲ್ಲಿ ನಡೆಯಬೇಕಿದ್ದ ಹಿಂದು ಸಮಾಜೋತ್ಸವವನ್ನು ಕೊರೋನಾ ಹಿನ್ನಲೆ ಮುಂದೂಡಲಾಗಿದೆ. ಆದರೆ ಕಾರ್ಯಕ್ರಮದ ಹಿನ್ನೆಲೆ ಈಗಾಗಲೇ ಆಗಮಿಸಿದ್ದ ದಿಕ್ಸೂಚಿ ಭಾಷಣಕಾರ್ತಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಸುದ್ದಿಗಾರರೊಂದಿಗೆ ಕೆಲಹೊತ್ತು ಮಾತನಾಡಿದರು.
ಈ ವೇಳೆ ಅವರು ನಮ್ಮ ಸುತ್ತ ಮುತ್ತಲೇ ಇರುವ ಗೋಮಾತೆ, ತುಳಸಿಯನ್ನು ಬಳಸುವುದರಿಂದ ಎಂತಹ ಮಾರಕ ರೋಗಗಳಿಂದಲೂ ದೂರ ಉಳಿಯಬಹುದು ಎಂಬುದನ್ನು ತಿಳಿಸಿದರು. ಕೊರೋನಾ ವೈರಸ್ ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸುವೆ. ಇನ್ಯಾರಿಗೂ ಆ ರೀತಿ ಆಗದಿರಲಿ. ರಾಷ್ಟ್ರಕಾರ್ಯ, ರಾಷ್ಟ್ರಚೇತನವನ್ನು ಜಾಗೃತಿಗೊಳಿಸಲು ಅಖಂಡ ಭಾರತದ ಸಂಕಲ್ಪನಿರ್ಮಾಣ ಕಾರ್ಯಕ್ಕೆ ನನ್ನ ಪ್ರಯತ್ನ ನಿರಂತರವಾಗಿರುತ್ತದೆ ಎಂದವರು ಇದೇ ವೇಳೆ ಹೇಳಿದರು.