ಮಂಗಳೂರು:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆತ್ತವರೊಂದಿಗೆ ಒಂದು ತಿಂಗಳ ಮಗುವಿಗೆ ಬಲವಂತವಾಗಿ ಕೊರೊನಾ ಟೆಸ್ಟ್ ನಡೆಸಿದ ಘಟನೆ ನಡೆದಿದೆ.
ದುಬೈನಿಂದ ಮಂಗಳೂರಿಗೆ ಆಗಮಿಸಿದ ಮಂಗಳೂರಿನ ಬೋಳಾರ ಮೂಲದ ದಂಪತಿ ನಿಯಮದಂತೆ ಕೊರೊನಾ ತಪಾಸಣೆಗೆ ಒಳಗಾಗಿದ್ದರು. ಇವರ ಜೊತೆಗೆ ಅವರ ಒಂದು ತಿಂಗಳ ಮಗು ಕೂಡ ಇದ್ದು ವಿಮಾನ ನಿಲ್ದಾಣದಲ್ಲಿ ಆರೋಗ್ಯ ಕಾರ್ಯಕರ್ತರು ಮಗುವಿನ ಆರ್ಟಿಪಿಸಿಆರ್ ತಪಾಸಣೆ ನಡೆಸಿದ್ದಾರೆ.
ಮಗುವಿನ ತಪಾಸಣೆಗೆ ವಿರೋಧಿಸಿದರೂ ಬಲವಂತವಾಗಿ ಮಗುವಿನ ಆರ್ಟಿಪಿಸಿಆರ್ ತಪಾಸಣೆ ನಡೆಸಿದ್ದಾರೆ. ಆರ್ಟಿಪಿಸಿಆರ್ ನಡೆಸಿದ ಆರೋಗ್ಯ ಸಿಬ್ಬಂದಿ ವಿರುದ್ಧ ಮಗುವಿನ ಹೆತ್ತವರು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಮಚಂದ್ರ ಬಾಯರಿ ಅವರು ನಿಯಮದಂತೆ ವಿಮಾನದಲ್ಲಿ ಬಂದ ಎರಡು ವರ್ಷದೊಳಗಿನ ಮಕ್ಕಳ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುವುದಿಲ್ಲ. ಮಗುವಿನ ಹೆತ್ತವರ ಕೊರೊನಾ ರಿಪೋರ್ಟ್ನಂತೆ ಮಗುವನ್ನು ನೋಡಲಾಗುವುದು. ಆದರೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಹಿತಿ ಕೊರತೆಯಿಂದ ಆರೋಗ್ಯ ಕಾರ್ಯಕರ್ತರು ಮಗುವಿಗೆ ಆರ್ಟಿಪಿಸಿಆರ್ ತಪಾಸಣೆ ನಡೆಸಿದ್ದಾರೆ. ಈ ಬಗ್ಗೆ ಹೆತ್ತವರು ನನಗೆ ದೂರು ನೀಡಿದ್ದು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.