ಮಂಗಳೂರು:ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ದಿನೇ ದಿನೆ ಹೆಚ್ಚಾಗುತ್ತಿದ್ದು, ಇಂದು 13 ಮಂದಿಗೆ ಸೋಂಕು ದೃಢಪಟ್ಟಿದೆ.
ಸೌದಿಯಿಂದ ಬಂದ ನಾಲ್ಕು ಮಂದಿ, ಶಾರ್ಜಾದಿಂದ ಬಂದ ಏಳು ಮಂದಿ ಮತ್ತು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಶಾರ್ಜಾದಿಂದ ಬಂದ 6 ಮಂದಿ ಮಹಿಳೆಯರು ಹಾಗೂ ಒಬ್ಬ ಪುರುಷ ಮತ್ತು ಸೌದಿಯಿಂದ ಬಂದ 4 ಪುರುಷರು ಹಾಗೂ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಇಬ್ಬರು ಪುರುಷರಿಗೆ ಇಂದು ಕೊರೊನಾ ದೃಢಪಟ್ಟಿದೆ. ಈಗಾಗಲೇ ಸೌದಿ ಮತ್ತು ಶಾರ್ಜಾದಿಂದ ಬಂದ 11 ಮಂದಿ ಕ್ವಾರಂಟೈನ್ನಲ್ಲಿದ್ದರು.
ಇಂದು 30 ಮಂದಿ ಗುಣಮುಖ:
ಜಿಲ್ಲೆಯಲ್ಲಿ ಇಂದು ಒಂದು ವರ್ಷದ ಎರಡು ಮತ್ತು 2 ವರ್ಷದ ಒಂದು ಮಗು ಸೇರಿದಂತೆ 30 ಮಂದಿ ಗುಣಮುಖರಾಗಿದ್ದಾರೆ. ಇವರ ಗಂಟಲು ದ್ರವದ ಪರೀಕ್ಷೆ ಎರಡು ಬಾರಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಗುಣಮುಖ ಎಂದು ಘೋಷಿಸಿ ಮನೆಗೆ ಕಳುಹಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 422 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ 206 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 8 ಮಂದಿ ಸಾವನ್ನಪ್ಪಿದ್ದು, 208 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 118 ಮಂದಿಯ ವರದಿ ಬಂದಿದ್ದು, ಅದರಲ್ಲಿ 13 ಪಾಸಿಟಿವ್, 105 ನೆಗೆಟಿವ್ ಬಂದಿದೆ. ಇಂದು 147 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.