ಮಂಗಳೂರು: ಗೋಲಿಬಾರ್ ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖೆಯ ಅಂತಿಮ ವರದಿ ಸಲ್ಲಿಕೆಗೆ ಕೊರೊನಾ ಭೀತಿ ತಡೆ ನೀಡಿದೆ. ಈ ವರದಿ ಸಲ್ಲಿಕೆಗೆ ನೀಡಲಾಗಿರುವ ಗಡುವನ್ನು ಇನ್ನಷ್ಟು ವಿಸ್ತರಿಸಬೇಕೆಂದು ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಗದೀಶ್ ಜಿ. ಸರ್ಕಾರವನ್ನು ಕೋರಿದ್ದಾರೆ.
ಮಂಗಳೂರು ಗೋಲಿಬಾರ್ ಮ್ಯಾಜಿಸ್ಟೀರಿಯಲ್ ತನಿಖೆ: ಅಂತಿಮ ವರದಿ ಸಲ್ಲಿಕೆಗೆ ಕೊರೊನಾ ತಡೆ
ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಈ ಹಿಂದೆ ಸರ್ಕಾರ ಸೂಚನೆ ನೀಡಿದ್ದು, ಕೊರೊನಾ ಎಫೆಕ್ಟ್ನಿಂದಾಗಿ ಗೋಲಿಬಾರ್ ಮ್ಯಾಜಿಸ್ಟೀರಿಯಲ್ ತನಿಖೆಯ ಅಂತಿಮ ವರದಿ ಸಲ್ಲಿಸಲು ಸಾಧ್ಯವಾಗಿಲ್ಲ.
ಮಂಗಳೂರು ಗೋಲಿಬಾರ್ ಪ್ರಕರಣದ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿಯಾಗಿ ಜಗದೀಶ್ ಜಿ.ಯವರನ್ನು ಸರ್ಕಾರ ನೇಮಕ ಮಾಡುವಾಗಲೇ ತನಿಖೆ ನಡೆಸಿ ಮೂರು ತಿಂಗಳೊಳಗೆ ಅಂತಿಮ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿತ್ತು. ಮಾರ್ಚ್ 21ಕ್ಕೆ ಮೂರು ತಿಂಗಳ ಅವಧಿ ಮುಕ್ತಾಯಗೊಂಡಿದ್ದು, ಮಾರ್ಚ್ 15ರಿಂದ ಕೊರೊನಾ ಸಂಕಷ್ಟ ತಲೆದೂರಿದೆ. ಇದರಿಂದ ವಿಚಾರಣೆ ಸಂಪೂರ್ಣವಾಗಿಲ್ಲ. ಈ ನಡುವೆ ಮಧ್ಯಂತರ ವರದಿ ಸಲ್ಲಿಕೆಯಾಗಿತ್ತು.
ಗೋಲಿಬಾರ್‌ಗೆ ಸಂಬಂಧಿಸಿದಂತೆ ಈವರೆಗೆ ಪೊಲೀಸರು ಹಾಗೂ ಸಾರ್ವಜನಿಕರ ಸಹಿತ 350ಕ್ಕೂ ಅಧಿಕ ಮಂದಿ ಸ್ಥಳಕ್ಕೆ ಹಾಜರಾಗಿ ಸಾಕ್ಷ್ಯ ವರದಿ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಯ ಪರವಾಗಿ ಸಾಕ್ಷ್ಯಾಧಾರ ಒದಗಿಸಲು 176 ಮಂದಿ ಪೊಲೀಸರು ಮುಂದೆ ಬಂದಿದ್ದಾರೆ. ಇದರಲ್ಲಿ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು, ಎಸಿಪಿ ಸೇರಿ 140 ಮಂದಿ ಪೊಲೀಸರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಇನ್ನು 30 ಮಂದಿ ಪೊಲೀಸರ ಹೇಳಿಕೆಗಳನ್ನು ಪಡೆದುಕೊಳ್ಳಲು ಬಾಕಿ ಇದೆ. ಮುಂದಿನ ವಿಚಾರಣೆಗೆ ದಿನಾಂಕ ನಿಗದಿಯಾಗಬೇಕಿದ್ದು, ಲಾಕ್ ಡೌನ್ ನಿಮಿತ್ತ ಕೋರ್ಟ್ ಕಲಾಪಗಳು ನಡೆದಿಲ್ಲ.