ಉಳ್ಳಾಲ (ಮಂಗಳೂರು): ಇಲ್ಲಿನ ಠಾಣಾ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿದೆ. ಶೀತ ಜ್ವರ ಕಾಣಿಸಿಕೊಂಡ ಕಾರಣ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಬುಧವಾರ ಬೆಳಗ್ಗೆ ತೆರಳಿರುವ ಅವರು ಕೋವಿಡ್ ಪರೀಕ್ಷೆ ಮಾಡಿಕೊಂಡಿದ್ದರು.
ಮುಂಜಾಗೃತಾ ಕ್ರಮವಾಗಿ ಕೆಲ ದಿನಗಳವರೆಗೆ ಠಾಣೆಯಲ್ಲಿ ಸೀಲ್‍ಡೌನ್ ಮಾಡಲು ಸಿದ್ಧತೆ ನಡೆದಿದೆ. ಬುಧವಾರ ಸಂಜೆಯಿಂದಲೇ ಠಾಣೆಗೆ ಸಂದರ್ಶನಕ್ಕೆ ಬರುವವರಿಗೆ ನಿರ್ಬಂಧ ವಿಧಿಸಲಾಗಿದೆ. ಸಹೋದ್ಯೋಗಿಗಳ ಕೋವಿಡ್ ಪರೀಕ್ಷೆಗೆ ಗಂಟಲು ದ್ರವ ಮಾದರಿಯನ್ನು ಆರೋಗ್ಯ ಇಲಾಖೆ ಜೂ.25 ರಂದು ಸಂಗ್ರಹ ಮಾಡುವ ಸಾಧ್ಯತೆ ಇದೆ. ಆಸ್ಪತ್ರೆಗೆ ಆರೋಗ್ಯ ಇಲಾಖೆ ಭೇಟಿ ನೀಡಿ ಸಂಪರ್ಕದ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ.
ಉಳ್ಳಾಲ ಠಾಣಾ ಸಿಬ್ಬಂದಿಗೆ ಕೊರೊನಾ ದೃಢ ಉಳ್ಳಾಲ ಆಸ್ಪತ್ರೆ ಸೀಲ್‍ಡೌನ್:
ಆಜಾದ್ ನಗರದ 57 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಅವರ ಮನೆಯಿಂದ ಸ್ವಲ್ಪ ದೂರದಲ್ಲಿರುವ 60 ವರ್ಷದ ಮಹಿಳೆಗೆ ಬುಧವಾರ ಕೊರೊನಾ ದೃಢಪಟ್ಟಿದೆ. ಜೂ.20 ರಂದು ಮಹಿಳೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಉಳ್ಳಾಲದ ಸಹರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂ.22ರವರೆಗೆ ಚಿಕಿತ್ಸೆ ಪಡೆದಿದ್ದ ಮಹಿಳೆಯನ್ನು ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಂದು ದೃಢವಾಗಿದೆ. ಇದೀಗ ಸೋಂಕಿತ ಮಹಿಳೆ ಚಿಕಿತ್ಸೆ ಪಡೆದಿದ್ದ ಉಳ್ಳಾಲದ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಅಲ್ಲಿನ ಸಿಬ್ಬಂದಿಯನ್ನು ಅದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗಿದೆ.