ಪುತ್ತೂರು/ದ.ಕ:ಹಲವಾರು ಬ್ಯಾಂಕ್‌ಗಳನ್ನು ಪರಿಚಯಿಸಿದ ದಕ್ಷಿಣ ಕನ್ನಡ ಪ್ರಯೋಗಶೀಲ ಜಿಲ್ಲೆಯಾಗಿದ್ದು, ಸಹಕಾರಿ ಕ್ಷೇತ್ರದ ತವರೂರಾಗಿಯೂ ಬೆಳೆದು ನಿಂತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಬಂಟರ ಭವನದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 'ಜನರ ಬಳಿಗೆ ನಮ್ಮ ಬ್ಯಾಂಕ್' ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಬ್ಯಾಂಕ್ ಇಂದು ನವೋದಯ ಸಂಘದ ಮೂಲಕ, ಮಹಿಳೆಯರು ಸೇರಿದಂತೆ ಎಲ್ಲರಿಗೂ ಚೈತನ್ಯ ನೀಡಿದೆ. ಸಹಕಾರಿ ಕ್ಷೇತ್ರ ಜನಸ್ನೇಹಿ ಬ್ಯಾಂಕ್ ಆಗಿ ಅಭಿವೃದ್ಧಿ ಹೊಂದಿದೆ ಎಂದರು.
ಜನರ ಬಳಿಗೆ ನಮ್ಮ ಬ್ಯಾಂಕ್' ಅಭಿಯಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಸುಮಾರು 15 ಟನ್‌ನಷ್ಟು ಯೂರಿಯಾದ ಬೇಡಿಕೆ ಇದ್ದು, ಕೇವಲ ನಾಲ್ಕು ಟನ್ ಯೂರಿಯಾ ಉತ್ಪಾದನೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬೇಡಿಕೆಗಳನ್ನು ಈಡೇರಿಸಲು ರಾಜ್ಯದಲ್ಲಿ ದಾವಣಗೆರೆಯಲ್ಲಿ ಸಹಕಾರಿ ಕ್ಷೇತ್ರದಿಂದ ಯೂರಿಯಾ ಫ್ಯಾಕ್ಟರಿ ತೆರೆಯುವ ಇರಾದೆ ಹೊಂದಿದ್ದೇವೆ ಎಂದರು.
ಈಗಾಗಲೇ ಜನರ ಬಳಿಗೆ ನಮ್ಮ ಬ್ಯಾಂಕ್ ಅಭಿಯಾನದಲ್ಲಿ, ತಾಲೂಕಿನಲ್ಲಿ ಸುಮಾರು 44 ಸ್ವಸಹಾಯ ಸಂಘ ಕಳೆದ ಮೂರು ದಿನಗಳಲ್ಲಿ ರಚನೆಯಾಗಿದೆ. ಅಭಿಯಾನದಲ್ಲಿ ಒಟ್ಟು 10 ಕೋಟಿ ರೂ. ಸಾಲ ವಿತರಿಸಲಾಗಿದ್ದು, 15 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ನವೋದಯ ಸ್ವಸಹಾಯ ಸಂಘಗಳಿಗೆ ಸೇರ್ಪಡೆಗೊಳ್ಳುವ ಮಹಿಳೆಯರಿಗೆ ಯೂನಿಫಾರ್ಮ್ ವಿತರಿಸಲಿದ್ದು, ಇದಕ್ಕಾಗಿ ಆರ್ಡರ್ ನೀಡಲಾಗಿದೆ ಎಂದರು.
ಮಹಿಳೆಯರು ಸ್ವಾವಲಂಬಿಯಾಗಲು ಸಹಕಾರಿ ಬ್ಯಾಂಕ್ ಕಾರಣವಾಗಿದ್ದು, ಜನರ ಬ್ಯಾಂಕ್ ಆಗಿ ಪರಿವರ್ತನೆಯಾಗಿದೆ. ಹಳ್ಳಿ ಜನರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ, ಇಂದು ಈ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮಾರ್ಚ್ ತಿಂಗಳ ಕೊನೆಯವರೆಗೂ ಅಭಿಯಾನ ಮುಂದುವರಿಯಲಿದೆ ಎಂದರು.