ಮಂಗಳೂರು: ನಗರದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಮನೆಯನ್ನು ಗುರು ಬೆಳದಿಂಗಳು ಸಂಸ್ಥೆಯೂ ನವೀಕರಣ ಮಾಡಿ ಹಸ್ತಾಂತರಿಸಿದೆ. ನವೆಂಬರ್ 19 ರಂದು ಮಂಗಳೂರು ನಗರದ ಗರೋಡಿಯಲ್ಲಿ ಚಲಿಸುತ್ತಿದ್ದ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತು. ಈ ರಿಕ್ಷಾ ಚಲಾಯಿಸುತ್ತಿದ್ದ ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದವು. ತಕ್ಷಣ ಆವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಗುರು ಬೆಳದಿಂಗಳು ಸಂಸ್ಥೆಯ ಪದ್ಮರಾಜ್ ಅವರು ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನು ನವೀಕರಣ ಮಾಡಿಕೊಡುವ ಭರವಸೆಯನ್ನು ನೀಡಿದ್ದರು. ಅದರಂತೆ ನವೀಕರಣ ಮಾಡಲಾಗಿದ್ದ ಮನೆಯನ್ನು ಬುಧವಾರ ಅವರು ಪುರುಷೋತ್ತಮ ಪೂಜಾರಿ ಅವರಿಗೆ ಹಸ್ತಾಂತರ ಮಾಡಲಾಯಿತು.
ನಗರದ ಪಂಪ್ವೆಲ್ ನ ಉಜ್ಜೋಡಿಯಲ್ಲಿ ಈ ಮನೆ ಇದೆ. ಅದರ ನವೀಕರಣಕ್ಕೆ ಸುಮಾರು 6 ಲಕ್ಷ ರೂ ವೆಚ್ಚವನ್ನು ಗುರು ಬೆಳದಿಂಗಳು ಸಂಸ್ಥೆ ಮಾಡಿದೆ. ಇದು ಗುರು ಬೆಳದಿಂಗಳು ಸಂಸ್ಥೆಯಿಂದ ನವೀಕರಣ ಮಾಡಿರುವ ಆರನೇ ಮನೆ. ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಧರ್ಮಗುರು ಬಿ ಜೆ ಕ್ರಾಸ್ತಾ, ಮಾಜಿ ರಾಜ್ಯಸಭೆ ಸದಸ್ಯ ಮೊಹಮ್ಮದ್, ಇಂಡಿಯಾನ ಆಸ್ಪತ್ರೆ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಯೂಸುಫ್ ಆಲಿ ಕುಂಬ್ಳೆ, ಉದ್ಯಮಿ ರೋಹನ್ ಮೊಂತೆರೋ, ಗುರುಬೆಳದಿಂಗಳು ಸಂಸ್ಥೆಯ ಪದ್ಮರಾಜ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.
ಗುರು ಬೆಳದಿಂಗಳು ಸಂಸ್ಥೆ ಮನೆ ನವೀಕರಣ:ಈ ಸಂದರ್ಭದಲ್ಲಿ ಮಾತನಾಡಿದ ಪುರುಷೋತ್ತಮ ಪೂಜಾರಿ ಅವರು, ನಾನು ಆಸ್ಪತ್ರೆಯಲ್ಲಿದ್ದಾಗ ನನಗೆ ಮನೆ ನವೀಕರಣ ಮಾಡಿಕೊಡುವ ಭರವಸೆಯನ್ನು ಗುರುಬೆಳದಿಂಗಳು ಸಂಸ್ಥೆಯವರು ನೀಡಿದ್ದರು. ಅದರಂತೆ ಆ ಸಂಸ್ಥೆಯಿಂದ ಮನೆ ನವೀಕರಣ ಮಾಡಿ ನೀಡಿರುವುದು ಖುಷಿ ತಂದಿದೆ ಎಂದರು.
ಗುರು ಬೆಳದಿಂಗಳು ಸಂಸ್ಥೆಯ ಪದ್ಮರಾಜ್ ಮಾತನಾಡಿ, ಪುರುಷೋತ್ತಮ ಪೂಜಾರಿ ತೀವ್ರವಾಗಿ ಎದೆಗುಂದಿದ್ದರು. ಮನೆ ಶಿಥಿಲಾವಸ್ಥೆಯಲ್ಲಿತ್ತು. ಮಗಳ ಮದುವೆ ನಿಗದಿಯಾಗಿತ್ತು. ಈ ಸಂದರ್ಭದಲ್ಲಿ ಆತ್ಮಸ್ಥೈರ್ಯ ತುಂಬಲು ಮನೆ ನವೀಕರಣ ಮಾಡಿ ಕೊಡುವ ಭರವಸೆ ನೀಡಿದ್ದೆವು. ದೇವರ ಅನುಗ್ರಹದಿಂದ ಮನೆ ನವೀಕರಣ ಕೆಲಸ ನಡೆದಿದೆ ಎಂದರು.