ಕರ್ನಾಟಕ

karnataka

ETV Bharat / state

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಕೊನೆಗೂ ಸಂತ್ರಸ್ತ ಆಟೋ ಚಾಲಕನಿಗೆ ಸಿಕ್ತು ಪರಿಹಾರ - ಆಟೋ ಚಾಲಕನಿಗೆ ಸಿಕ್ತು ಪರಿಹಾರ

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಆಟೋ ಡ್ರೈವರ್​ಗೆ ಕೊನೆಗೂ ಸರ್ಕಾರದ ಪರಿಹಾರ ಸಿಕ್ಕಿದೆ.

cooker-bomb-blast-case-victim-auto-driver-gets-compensation
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಕೊನೆಗೂ ಸಂತ್ರಸ್ತೆ ಆಟೋ ಚಾಲಕನಿಗೆ ಸಿಕ್ತು ಪರಿಹಾರ

By ETV Bharat Karnataka Team

Published : Jan 17, 2024, 1:08 PM IST

ಮಂಗಳೂರು:ಕುಕ್ಕರ್ ಬಾಂಬ್ ಸ್ಫೋಟದಿಂದ ಗಾಯಗೊಂಡಿದ್ದ ಆಟೋ ಡ್ರೈವರ್ ಪುರುಷೋತ್ತಮ ಪೂಜಾರಿ ಅವರಿಗೆ ಕೊನೆಗೂ ಘಟನೆ ನಡೆದ ಒಂದು ವರ್ಷದ ಬಳಿಕ ಸರ್ಕಾರದ ಪರಿಹಾರ ಸಿಕ್ಕಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಕರಣ ನಡೆದಿತ್ತು.

ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ. ಪರಿಹಾರ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಖಾತೆಗೆ ಜನವರಿ 1 ರಂದು ಸಿಎಂ ಪರಿಹಾರ ನಿಧಿಯಿಂದ ಬಿಡುಗಡೆಯಾದ ಈ ಚೆಕ್ ಅನ್ನು ಪುರುಷೋತ್ತಮ ಪೂಜಾರಿಗೆ ವಿತರಣೆ ಮಾಡಲಾಗಿದೆ. ಈ ಬಗ್ಗೆ ಸಿಎಂ ಜಂಟಿ ಕಾರ್ಯದರ್ಶಿ ಪಿ. ಗೋಪಾಲ್ ಆದೇಶ ಹೊರಡಿಸಿದ್ದರು.

2022 ರ ನವೆಂಬರ್ 19 ರಂದು ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತ್ತು. ಆರೋಪಿ ಶಾರೀಕ್ ಕುಕ್ಕರ್ ಬಾಂಬ್ ಸ್ಫೋಟಕವನ್ನು ಆಟೋದಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಬ್ಲಾಸ್ಟ್​ ಆಗಿತ್ತು. ಮಂಗಳೂರಿನ ಪಡೀಲ್​ನಿಂದ ಪಂಪ್​ವೆಲ್ ಕಡೆಗೆ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಗರೋಡಿ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಮತ್ತು ಶಾರೀಕ್​ಗೆ ಸುಟ್ಟ ಗಾಯಗಳಾಗಿತ್ತು. ಬಳಿಕ ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಂತ್ರಸ್ತ ಆಟೋ ಚಾಲಕನಿಗೆ ಸಿಕ್ತು ಪರಿಹಾರ

ಪ್ರರಕಣ ಸಂಬಂಧ ಆರಂಭದಲ್ಲಿ ಮಂಗಳೂರು ನಗರ ಪೊಲೀಸರು ತನಿಖೆ ನಡೆಸಿದ್ದು, ಬಳಿಕ ಎನ್​ಐಎಗೆ ಹಸ್ತಾಂತರವಾಗಿತ್ತು. ಈ ಕುಕ್ಕರ್ ಬಾಂಬ್​ನ್ನು ಕದ್ರಿ ದೇವಸ್ಥಾನದಲ್ಲಿ ಸ್ಫೋಟಿಸಲು ಕೊಂಡೊಯ್ಯಲಾಗುತ್ತಿತ್ತು ಎಂಬುದನ್ನು ಎನ್​ಐಎ ತನಿಖೆ ತಿಳಿಸಿತ್ತು. ಇತ್ತ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ರಿಕ್ಷಾ ಚಾಲಕ ಪುರುಷೋತ್ತಮ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಘಟನೆ ಬಳಿಕ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ‌ಕಾಮತ್ ಅವರು ಪುರುಷೋತ್ತಮ ಅವರನ್ನು ಭೇಟಿ ಮಾಡಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು.

ಇದರ ನಡುವೆ ಶಾಸಕ ವೇದವ್ಯಾಸ ಕಾಮತ್ ಅವರು ಪುರುಷೋತ್ತಮಗೆ ರಿಕ್ಷಾವೊಂದನ್ನು ಕೊಡಿಸಿದ್ದರು. ಜೊತೆಗೆ ಗುರು ಬೆಳದಿಂಗಲು ಸಂಸ್ಥೆಯಿಂದ ಅವರ ಮನೆಯನ್ನು ನವೀಕರಣ ಮಾಡಿ ಕೊಡಲಾಗಿದೆ. ಅಲ್ಲದೆ, ಸಿಎಂ ಪರಿಹಾರ ನಿಧಿಯಿಂದ ನೆರವು ನೀಡುವಂತೆ ಕಾಂಗ್ರೆಸ್​ ಮುಖಂಡ ಐವನ್ ಡಿಸೋಜ ಅವರು ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಲಕ್ಷ ಪರಿಹಾರ ನೀಡುವಂತೆ ಆದೇಶ ಮಾಡಿದ್ದಾರೆ.

ಇದನ್ನೂ ಓದಿ:ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಒಂದು ವರ್ಷ: ಆಟೋ ಚಾಲಕನಿಗೆ ಇನ್ನೂ ಸಿಗದ ಪರಿಹಾರ

ABOUT THE AUTHOR

...view details