ಈಟಿವಿ ಭಾರತದೊಂದಿಗೆ ಮಾತನಾಡಿದ ಆಟೋ ಚಾಲಕ ಮಂಗಳೂರು: ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿ ಒಂದು ವರ್ಷ ಸಂದಿದೆ. 2022ರ ನವೆಂಬರ್ 19 ರಂದು ಮಂಗಳೂರಿನಲ್ಲಿ ಬಾಂಬ್ ಸ್ಫೋಟವಾಗಿತ್ತು. ಪ್ರಕರಣದಲ್ಲಿ ಬಂಧಿತನಾಗಿದ್ದ ಶಾರೀಕ್ ಕುಕ್ಕರ್ ತೆಗೆದುಕೊಂಡು ಸ್ಫೋಟಿಸಲು ರಿಕ್ಷಾದಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಏಕಾಏಕಿ ಸಿಡಿದಿತ್ತು.
ಪಡೀಲ್ನಿಂದ ಪಂಪ್ವೆಲ್ ಕಡೆಗೆ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ತೆಗೆದುಕೊಂಡು ಬರುತ್ತಿದ್ದಾಗ ಗರೋಡಿ ಬಳಿ ಸ್ಫೋಟಗೊಂಡಿತ್ತು. ಇದರಿಂದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಮತ್ತು ಉಗ್ರ ಶಾರೀಕ್ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಮೊದಲಿಗೆ ಮಂಗಳೂರು ನಗರ ಪೊಲೀಸರು ಈ ಸಂಬಂಧ ತನಿಖೆ ನಡೆಸಿದರು. ಬಳಿಕ ಹೆಚ್ಚಿನ ತನಿಖೆಗಾಗಿ ಎನ್ಐಎಗೆ ಹಸ್ತಾಂತರಿಸಲಾಯಿತು. ಎನ್ಐಎ ತನಿಖೆ ವೇಳೆ ಕುಕ್ಕರ್ ಬಾಂಬ್ ಅನ್ನು ಕದ್ರಿ ದೇವಸ್ಥಾನದಲ್ಲಿ ಸ್ಫೋಟಿಸಲು ಕೊಂಡೊಯ್ಯಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಗುಣಮುಖರಾಗಿರುವ ರಿಕ್ಷಾ ಚಾಲಕ ಪುರುಷೋತ್ತಮ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಘಟನೆ ನಡೆದು ಒಂದು ವರ್ಷವಾದರೂ ಸಂತ್ರಸ್ತ ಚಾಲಕನಿಗೆ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಇನ್ನೂ ಪರಿಹಾರ ನೀಡಿಲ್ಲ.
ಇದನ್ನೂ ಓದಿ:ಕುಕ್ಕರ್ ಸ್ಫೋಟ ಕೇಸ್.. ರಿಕ್ಷಾ ಚಾಲಕನಿಗೆ ಗುರು ಬೆಳದಿಂಗಳು ಸಂಸ್ಥೆಯಿಂದ ಮನೆ ಹಸ್ತಾಂತರ.. ಇನ್ನೂ ಸಿಗದ ಸರ್ಕಾರದ ಪರಿಹಾರ
ರಿಕ್ಷಾ ಚಾಲನೆ ಮಾಡಲಾಗುತ್ತಿಲ್ಲ:ಘಟನೆ ಸಂಭವಿಸಿದಾಗ ಅಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಸರ್ಕಾರದಿಂದ ಪರಿಹಾರ ನೀಡುವ ಭರವಸೆ ನೀಡಿದ್ದರು. ಇದರ ನಡುವೆ ವೇದವ್ಯಾಸ ಕಾಮತ್ ಅವರು ಪುರುಷೋತ್ತಮ ಪೂಜಾರಿ ಅವರಿಗೆ ರಿಕ್ಷಾವೊಂದನ್ನು ನೀಡಿದ್ದರು. ಆದರೆ, ಪುರುಷೋತ್ತಮ ರಿಕ್ಷಾ ಓಡಿಸಲು ಸಾಧ್ಯವಾಗದಿರುವುದರಿಂದ ಅದನ್ನು ಬೇರೆಯವರು ನಡೆಸಲು ಕೊಟ್ಟಿದ್ದಾರೆ. ಜೊತೆಗೆ ಗುರು ಬೆಳದಿಂಗಲು ಸಂಸ್ಥೆಯಿಂದ ಮನೆ ನವೀಕರಣ ಮಾಡಿ ಕೊಡಲಾಗಿದೆ.
ಇದನ್ನೂ ಓದಿ:ತುಂಗಾನದಿಯಲ್ಲಿ ಬಾಂಬ್ ಸ್ಫೋಟ ಪ್ರಯೋಗ ಪ್ರಕರಣ : ತೀರ್ಥಹಳ್ಳಿಯ ನಾಲ್ವರಿಗೆ ಎನ್‌ಐಎ ನೊಟೀಸ್
ಪುರುಷೋತ್ತಮ ಪೂಜಾರಿ ಅಳಲು:ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಪುರುಷೋತ್ತಮ ಪೂಜಾರಿ, "ಕುಕ್ಕರ್ ಬಾಂಬ್ ಸ್ಫೋಟವಾಗಿ ಒಂದು ವರ್ಷ ಕಳೆದರೂ ಸರ್ಕಾರದ ಪರಿಹಾರ ಸಿಕ್ಕಿಲ್ಲ. ಶಾಸಕ ವೇದವ್ಯಾಸ ಕಾಮತ್ ರಿಕ್ಷಾ ಮತ್ತು 5 ಲಕ್ಷ ರೂ. ಹಣ ನೀಡಿದ್ದಾರೆ. ಗುರು ಬೆಳದಿಂಗಳು ಸಂಸ್ಥೆಯಿಂದ ಮನೆ ನವೀಕರಣ ಮಾಡಿ ಕೊಟ್ಟಿದ್ದಾರೆ. ಸರ್ಕಾರ ನೀಡಿದ ಪರಿಹಾರದ ಭರವಸೆ ಹಾಗೆಯೇ ಉಳಿದಿದೆ. ಐವನ್ ಡಿಸೋಜ ಅವರು ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಸಾಕಷ್ಟು ಹಣ ಬೇಕಾಗಿದೆ" ಎಂದರು.
ಇದನ್ನೂ ಓದಿ:ಮುಂದಿನ ಜೀವನ ದೇವರೇ ಗತಿ.. ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಪುರುಷೋತ್ತಮ ಪೂಜಾರಿ ಅಳಲು