ಮಂಗಳೂರು: ನಗರದಲ್ಲಿ ವಿವಾದಿತ ಗೋಡೆ ಬರಹಗಳು ಕಾಣಿಸಿಕೊಳ್ಳುತ್ತಿದ್ದು, ಎರಡು ದಿನಗಳ ಅಂತರದಲ್ಲಿ ಎರಡು ಕಡೆಗಳಲ್ಲಿ ವಿವಾದಾತ್ಮಕ ಗೋಡೆ ಬರಹಗಳು ಕಾಣಿಸಿಕೊಂಡಿದೆ. ಆದರೆ ಈವರೆಗೆ ಕೃತ್ಯ ನಡೆಸಿರುವ ಆರೋಪಿಗಳು ಯಾರು ಎಂಬುದು ಪತ್ತೆಯಾಗಿಲ್ಲ. ವಿವಾದಿತ ಬರಹಗಳು ಮೂಡುತ್ತಿರುವುದು ಪೊಲೀಸರ ನಿದ್ದೆಗೆಡಿಸಿದ್ದು ಮಾತ್ರವಲ್ಲ. ನಗರದ ಜನತೆಯಲ್ಲಿಯೂ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕಳೆದ ಶುಕ್ರವಾರ ನಗರದ ಸರ್ಕ್ಯೂಟ್ ಹೌಸ್ಗೆ ಹೋಗುವ ರಸ್ತೆ ಬದಿಯ ಅಪಾರ್ಟ್‌ಮೆಂಟ್ ಒಂದರ ಗೋಡೆಯಲ್ಲಿ ಹ್ಯಾಷ್ ಟ್ಯಾಗ್ ಹಾಕಿ ಲಷ್ಕರ್-ಎ-ತೋಯ್ಬಾ ಹಾಗೂ ತಾಲಿಬಾನ್ ಸಂಘಟನೆಗಳ ಪರವಾಗಿ ಬರೆಯಲಾಗಿತ್ತು. ತಕ್ಷಣ ಪೊಲೀಸರು ಇದಕ್ಕೆ ಪೇಂಟ್ ಬಳಿದು ಗೋಣಿಯನ್ನು ಮುಚ್ಚಿ ಕೃತ್ಯ ನಡೆಸಿದವರ ಬಗ್ಗೆ ತನಿಖೆ ನಡೆಸುತ್ತಿದ್ದರು. ಇದಾಗಿ ಎರಡೇ ದಿನದಲ್ಲಿ ಅಂದರೆ ಭಾನುವಾರ ಬೆಳಗ್ಗೆ ಪಿವಿಎಸ್ ಬಳಿಯಿರುವ ಕೋರ್ಟ್ ರಸ್ತೆಯಲ್ಲಿ ನ್ಯಾಯಾಲಯಕ್ಕೆ ಸೇರಿರುವ ಹಳೆಯ ಕಟ್ಟಡದ ಗೋಡೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬರೆದ ವಿವಾದಿತ ಉರ್ದು ಬರಹ ಕಂಡು ಬಂದಿದೆ. 'ಪ್ರವಾದಿಗೆ ಕೋಪ ಬಂದಲ್ಲಿ ಒಂದೇ ಶಿಕ್ಷೆ. ದೇಹದಿಂದ ತಲೆ ಬೇರ್ಪಡುವುದು' ಎಂದು ಬರೆಯಲಾಗಿದೆ. ಬೆಳಗ್ಗೆ ದಾರಿ ಹೋಕರು ಈ ಬರಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರು ಬಣ್ಣ ಬಳಿದು ಅಳಿಸಿ ಹಾಕಿದ್ದಾರೆ.
ಈ ಎರಡೂ ಕೃತ್ಯದ ಬಗ್ಗೆ ಪೊಲೀಸರು ಐಪಿಎಸ್ 153ಎ (ಸಮುದಾಯಗಳ ನಡುವೆಯ ಸಾಮರಸ್ಯ ಕೆಡಿಸುವುದು) ಹಾಗೂ ಕರ್ನಾಟಕ ಸಾರ್ವಜನಿಕ ಪ್ರದೇಶಗಳ ವಿರೂಪ ಪ್ರತಿಬಂಧಕ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಪೊಲೀಸರ ನಿದ್ದೆಗೆಡಿಸಿದ್ದು, ಈ ಬಗ್ಗೆ ಮೊದಲ ಪ್ರಕರಣದಲ್ಲಿ ಕೆಲವರನ್ನು ವಶಕ್ಕೆ ಪಡೆದು ತನಿಖೆಯನ್ನು ನಡೆಸಿದ್ದಾರೆ. ಎರಡೂ ಕಡೆಗಳಲ್ಲಿ ಬರೆದವರೂ ಒಂದೇ ತಂಡದವರು ಇರಬಹುದೆಂಬ ಶಂಕೆಯಲ್ಲಿ ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ.