ಕರ್ನಾಟಕ

karnataka

ಮಂಗಳೂರು: 'ಈದ್​ ಮಿಲಾದ್ ದಿನ ಹಸಿ ಮೀನು ವ್ಯಾಪಾರಕ್ಕೆ ಕಡ್ಡಾಯ ರಜೆ' ವಿವಾದ; ಮೀನುಗಾರರ ಸಂಘದ ಸ್ಪಷ್ಟನೆ ಹೀಗಿದೆ..

By ETV Bharat Karnataka Team

Published : Sep 25, 2023, 10:12 AM IST

Updated : Sep 25, 2023, 10:31 AM IST

ಮಂಗಳೂರಿನ ದಕ್ಕೆಯಲ್ಲಿ ಮೀನು ವ್ಯಾಪಾರಸ್ಥರ ಸಂಘವು ಈದ್​ ಮಿಲಾದ್​ ದಿನ ಹಸಿ ಮೀನು ವ್ಯಾಪಾರಸ್ಥರು ಕಡ್ಡಾಯವಾಗಿ ರಜೆ ತೆಗೆದುಕೊಳ್ಳಬೇಕೆಂಬ ಸೂಚನೆ ವಿವಾದಕ್ಕೆ ಕಾರಣವಾಗಿದೆ.

ಬ್ಯಾನರ್ ಅಳವಡಿಕೆ ವಿವಾದ
ಬ್ಯಾನರ್ ಅಳವಡಿಕೆ ವಿವಾದ

ಮಂಗಳೂರು:ಈದ್​ ಮಿಲಾದ್​ ದಿನ ಹಸಿ ಮೀನು ವ್ಯಾಪಾರಸ್ಥರು ಕಡ್ಡಾಯವಾಗಿ ರಜೆ ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದ್ದು, ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಹಸಿ ಮೀನು ವ್ಯಾಪಾರಸ್ಥರ ಸಂಘ ಈ ಕುರಿತು ಸ್ಪಷ್ಟನೆ ನೀಡಿದೆ.

ಸೂಚನೆ ಏನು?: 'ವ್ಯಾಪಾರಸ್ಥರ ಸಂಘದ ನಿರ್ಧಾರದಂತೆ ತಾ.28-09-2023ನೇ ಮುಂಜಾನೆ ಗಂಟೆ 3:45ರ ನಂತರ ಹಸಿ ಮೀನು ವ್ಯಾಪಾರಿಗಳು ವ್ಯಾಪಾರ ಮಾಡದೇ ಕಡ್ಡಾಯವಾಗಿ ರಜೆ ತೆಗೆದುಕೊಳ್ಳಬೇಕು. ರಜೆ ಮಾಡದೇ ಕಾನೂನು ಉಲ್ಲಂಘಿಸಿದ್ದಲ್ಲಿ 1 ತಿಂಗಳ ಕಾಲ ಆ ವ್ಯಕ್ತಿಯು ಬಂದರು ಧಕ್ಕೆಯಲ್ಲಿ ವ್ಯಾಪಾರ ಮಾಡದಂತೆ ಸಂಘವು ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ದಂಡನೆ ವಿಧಿಸುಗುತ್ತದೆ. ಹಾಗೂ ಅವರು ಸಂಘದ ಸಹಕಾರದಿಂದ ವಂಚಿತರಾಗಬೇಕಾಗುತ್ತದೆ. ತಪ್ಪದೆ ಕಾನೂನು ಪಾಲಿಸಬೇಕಾಗಿ ವಿನಂತಿ' ಎಂದು ತಿಳಿಸಲಾಗಿದೆ.

ಹಸಿ ಮೀನು ವ್ಯಾಪಾರಸ್ಥರ ಸಂಘದ ಸ್ಪಷ್ಟನೆ: 'ಮಂಗಳೂರು ದಕ್ಕೆಯಲ್ಲಿ ಪ್ರತಿ ವರ್ಷ ತನ್ನ ಮತ್ತು ಇತರ ಸಂಘದ ಸಭೆಯ ನಿರ್ಣಯದಂತೆ, ಹಸಿಮೀನು ವ್ಯಾಪಾರಸ್ಥರ ಸಂಘದ ಸದಸ್ಯರು ಅವರವರು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ ಹಬ್ಬಗಳ ದಿನಗಳಲ್ಲಿ ತಮ್ಮ ವ್ಯವಹಾರಕ್ಕೆ ಕಡ್ಡಾಯ ರಜೆ ಹೊಂದುವ ಪೂರ್ವನಿರ್ಧರಿತ ಪದ್ಧತಿಯಂತೆ 28 ಸೆಪ್ಟೆಂಬರ್ 2023 ರಂದು ಮುಸ್ಲಿಮರ ಹಬ್ಬವಾದ ಈದ್ ಮಿಲಾದ್ ಪ್ರಯುಕ್ತ ಅವರು ಮತ್ತು ಇತರ ಧರ್ಮ ಬಾಂಧವರು ಕಡ್ಡಾಯ ರಜೆ ಪಾಲಿಸುವ ಬಗ್ಗೆ ವಿವಿಧ ಸಂಘಗಳಲ್ಲಿ ನಿರ್ಣಯಿಸಿದಂತೆ ಪ್ರಕಟಣೆಯ ಫಲಕ ಅಳವಡಿಸಲಾಗಿದೆ'.

'ಅದೇ ರೀತಿ, ವರ್ಷದ ಇತರ ದಿನಗಳಲ್ಲಿ ಇತರ ಹಬ್ಬಗಳಾದ ಬಾರ್ಕೂರು ಪೂಜೆ, ಉಚ್ಚಿಲ ಪೂಜೆ, ಗಣೇಶ ಚತುರ್ಥಿ, ಈದ್ ಉಲ್ ಫಿತರ್, ಬಕ್ರೀದ್, ಈದ್ ಮಿಲಾದ್, ಗುಡ್ ಫ್ರೈಡೇ ಮತ್ತು ಕ್ರಿಸ್ಮಸ್ ಎಂಬಿತ್ಯಾದಿ ಶುಭ ದಿನಗಳಲ್ಲಿ ಕೂಡಾ ಸಂಘಗಳ ನಿರ್ಣಯದಂತೆ ಮಾರಾಟಗಾರರು ಕಡ್ಡಾಯ ರಜೆ ಹೊಂದಿ ಆ ದಿನದ ಮಟ್ಟಿಗೆ ಮೀನುಗಾರಿಕಾ ಮಾರಾಟ ಚಟುವಟಿಕೆ ಸ್ಥಗಿತಗೊಳಿಸುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ'.

'ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆಯಲ್ಲಿ ಹಸಿ ಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘ, ಪರ್ಸಿಯನ್ ಬೋಟ್ ಯೂನಿಯನ್, ಟ್ರಾಲ್ ಬೋಟ್ ಯೂನಿಯನ್, ಫಿಶ್ ಬಯ್ಯರ್ಸ್ ಎಸೋಸಿಯೇಶನ್ ಮತ್ತಿತರ ಸಂಘಗಳು ಸಂಯುಕ್ತವಾಗಿ ಈ ರಜೆಗಳನ್ನು ನಿರ್ಧರಿಸಲಾಗಿದೆ'.

'ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಂಘದ ಮಿಲಾದ್ ರಜೆಯ ಪ್ರಕಟಣಾ ಫಲಕ (ಫ್ಲೆಕ್ಸ್) ಬಗ್ಗೆ ಕೆಲವರು ತಪ್ಪು ಗ್ರಹಿಕೆಯ ಪ್ರಚೋದನಾತ್ಮಕ ಮಾಹಿತಿ ಹಂಚುತ್ತಿರುವುದು ಖೇದಕರ. ಇಂತಹ ತಪ್ಪು ಮಾಹಿತಿಗಳಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದಾಗಿ ವಿನಂತಿ' ಎಂದು ಮಂಗಳೂರು ದಕ್ಕೆ ಹಸಿಮೀನು ಮಾರಾಟಗಾರರ ಮತ್ತು ಕಮಿಷನ್ ಏಜೆಂಟರ ಸಂಘದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.

ಇದನ್ನೂ ಓದಿ:ಮಂಗಳೂರು: ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್ ವಾಹನ ಪಲ್ಟಿ

Last Updated : Sep 25, 2023, 10:31 AM IST

ABOUT THE AUTHOR

...view details