ಮಂಗಳೂರು: ಹೊಸ ತಾಲೂಕುಗಳಾದ ಕಡಬ, ಮುಲ್ಕಿ, ಮೂಡುಬಿದಿರೆ ಹಾಗೂ ಉಳ್ಳಾಲಗಳಲ್ಲಿ ತಲಾ 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳ ಒಳಗಡೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ಆರು ತಿಂಗಳೊಳಗೆ ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣ.. ಐವನ್ ಡಿಸೋಜ - ಡಿಸೋಜ
ಹೊಸ ತಾಲೂಕುಗಳಾದ ಕಡಬ, ಮುಲ್ಕಿ, ಮೂಡುಬಿದಿರೆ ಹಾಗೂ ಉಳ್ಳಾಲಗಳಲ್ಲಿ ತಲಾ 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳ ಒಳಗಡೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಐವನ್ ಡಿಸೋಜ ಹೇಳಿದರು.
ಪುತ್ತೂರು ತಾಲೂಕು ಕಚೇರಿಗೆ ಭೇಟಿ ನೀಡಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಡಿಸೋಜ, ಈ ತಾಲೂಕುಗಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲು ಸರಕಾರ ಬದ್ಧವಾಗಿದೆ. ನಾನು ಕಂದಾಯ ಇಲಾಖೆಯ ಉಸ್ತುವಾರಿ ವಹಿಸಿದ ಬಳಿಕ ಇಲಾಖೆಯ ಎಲ್ಲಾ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಿ, ಅನುಷ್ಠಾನಕ್ಕಿರುವ ತೊಡಕುಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ. ಕೆಲ ಕಾನೂನುಗಳನ್ನು ಸರಳೀಕರಿಸುವ ವ್ಯವಸ್ಥೆಯನ್ನೂ ಮಾಡಿದ್ದೇನೆ. ಅನುಷ್ಠಾನ ಮಾಡಲು ಸಾಧ್ಯವಾಗದ ಕಾನೂನುಗಳನ್ನು ಕೈಬಿಡುವ ವಿಚಾರವನ್ನು ಸರಕಾರಕ್ಕೆ ಶಿಫಾರಸು ಮಾಡಲಿದ್ದೇನೆ ಎಂದರು.
ಕಾನೂನು ಪ್ರಕಾರ ಸರ್ಕಾರಿ ಜಮೀನು ಪಡೆದವರು 25 ವರ್ಷಗಳ ಕಾಲ ಮಾರಾಟ ಮಾಡುವ ಅಧಿಕಾರ ಇಲ್ಲ. ಆದರೆ, ಅನಿವಾರ್ಯ ಇರುವ ಸಂದರ್ಭ ಭೂಮಿ ಮಾರಾಟ ಮಾಡಲು ಸಾಧ್ಯವಾಗದ ಈ ಕಾನೂನು ಸರಿಯಾದ ಕ್ರಮವಲ್ಲ. ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಈ ಬಗ್ಗೆ ಮತ್ತೆ ಹಕ್ಕು ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದು ಐವನ್ ಡಿಸೋಜ ಹೇಳಿದರು.