ಮಂಗಳೂರು:ಕೊರೊನಾವನ್ನು ಸರ್ಕಾರ ದಂಧೆಯಾಗಿ ಮಾರ್ಪಾಟು ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರಿಗೆ ವೆಂಟಿಲೇಟರ್ ಕೊರತೆ ಕಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆಪಾದಿಸಿದರು.
ಕೊರೊನಾವನ್ನು ಸರ್ಕಾರ ದಂಧೆ ಮಾಡಿಕೊಂಡಿದೆ: ಹರೀಶ್ ಕುಮಾರ್ ಆರೋಪ - Coronavirus update
ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸರ್ಕಾರದ ವಿರುದ್ಧ ವೆನ್ಲಾಕ್ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ವೆನ್ಲಾಕ್ ಆಸ್ಪತ್ರೆ ಮುಂಭಾಗದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಜಾಗಟೆ ಬಾರಿಸುವುದು, ಚಪ್ಪಾಳೆ ತಟ್ಟುವುದು, ದೀಪ ಬೆಳಗಿಸಿದ್ದು ಬಿಟ್ಟರೆ ರಾಜ್ಯಕ್ಕೆ ಕೊರೊನಾಗೆ ಸಂಬಂಧಿಸಿದಂತೆ ಯಾವುದೇ ಸಹಾಯ ಮಾಡಿಲ್ಲ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಕೂಡ ಮಾಸ್ಕ್, ವೆಂಟಿಲೇಟರ್ ಹಂಚಿಕೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆಯಿದೆ ಎಂಬ ವಿಚಾರದಿಂದ ಜನರು ಭಯಭೀತರಾಗಿದ್ದಾರೆ. ಸಂಕಷ್ಟದಲ್ಲಿ ಜನರ ನೆರವಿಗೆ ಬಾರದ ಸರ್ಕಾರ ಜನ ವಿರೋಧಿಯಾಗಿದ್ದು, ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದರು.