ಮೂಡುಬಿದಿರೆ: ರಾಜ್ಯ, ಜಿಲ್ಲಾ ಹಾಗೂ ವಿವಿಧ ಮಹಿಳಾ ಕಾಂಗ್ರೆಸ್ ಘಟಕಗಳ ಸದಸ್ಯರು ರಾಜಕೀಯ ಒತ್ತಡಗಳ ನಡುವೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೂಡುಬಿದಿರೆಯ ಬನ್ನಡ್ಕದಲ್ಲಿರುವ ಸೋನ್ಸ್ ಫಾರ್ಮ್ಗೆ ಮಹಿಳಾ ಕಾರ್ಮಿಕರೊಂದಿಗೆ ಬೆರೆತು ಕೆಲಸ ಮಾಡಿದರು.
ಮೂಡುಬಿದಿರೆ: ಕೃಷಿ ಚಟುವಟಿಕೆಯಲ್ಲಿ ತೊಡಗಿದ ಮಹಿಳಾ ಕಾಂಗ್ರೆಸ್ ಸದಸ್ಯರು ಈ ಸಂದರ್ಭ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಹುಣಸೂರು ಜಿ.ಪಂ. ಸದಸ್ಯೆ ಡಾ. ಪುಷ್ಪಾ ಅಮರನಾಥ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕೃಷಿ ಸುಧಾರಣೆ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಮುಷ್ಕರ 48 ದಿನ ದಾಟಿದೆ. 55 ಮಂದಿ ಪ್ರಾಣಾರ್ಪಣೆ ಮಾಡಿದ್ದಾರೆ. ಸರ್ಕಾರ ಈ ಕಾಯ್ದೆಗಳ ಪರಿಷ್ಕರಣೆ ನಡೆಸಲೇಬೇಕಾಗಿದೆ ಎಂದು ಆಗ್ರಹಿಸಿದರು.
ಕೃಷಿಕರು, ವಿಶೇಷವಾಗಿ ಮಹಿಳಾ ಕಾರ್ಮಿಕರಲ್ಲಿ ಆತ್ಮ ಶಕ್ತಿ ತುಂಬಲು ರಾಜ್ಯ ಮಹಿಳಾ ಕಾಂಗ್ರೆಸ್ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಶ್ರಮದಾನದ ಮೂಲಕ ಈ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಈಗಾಗಲೇ ಮೈಸೂರು, ಹುಬ್ಬಳ್ಳಿ, ಉಡುಪಿಯ ಹೆಗ್ಗುಂಜೆಗೆ ಭೇಟಿ ನೀಡಿ ಮಹಿಳೆಯರೊಂದಿಗೆ ಸಂವಹನ ನಡೆಸಲಾಗಿದೆ. ಇದರ ಮುಂದಿನ ಹಂತದಲ್ಲಿ ಸ್ಥಳೀಯ ಘಟಕಗಳು ಈ ಕಾರ್ಯವನ್ನು ಮುಂದುವರಿಸಲಿವೆ ಎಂದು ಡಾ. ಪುಷ್ಪಾ ಅಮರನಾಥ್ ಹೇಳಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಡಾ. ಎಲ್.ಸಿ. ಸೋನ್ಸ್ ಅವರ ಉಪಸ್ಥಿತಿಯಲ್ಲಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಮೂಡುಬಿದಿರೆ ಬ್ಲಾಕ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಮಂಗಳೂರು ನಗರ ಬ್ಲಾಕ್ ಅಧ್ಯಕ್ಷೆ ಶಾಂತಲಾ ಗಟ್ಟಿ, ಸುರತ್ಕಲ್ ಬ್ಲಾಕ್ ಅಧ್ಯಕ್ಷೆ ಶಶಿಕಲಾ ಸೇರಿದಂತೆ ಮತ್ತಿತರರು ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.