ಕರ್ನಾಟಕ

karnataka

ETV Bharat / state

ಟೋಲ್ ಗೇಟ್ ಹೋರಾಟ.. ಮಧ್ಯರಾತ್ರಿ ಬಂದು ಬಾಗಿಲು ತಟ್ಟಬಹುದೇ? ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಕಿಡಿ

ಟೋಲ್ ಗೇಟ್ ಹೋರಾಟಗಾರರ ಮನೆಗೆ ಶನಿವಾರ ರಾತ್ರಿ ಪೊಲೀಸರು ತೆರಳಿ ನೋಟಿಸ್ ಜಾರಿ ಮಾಡಿದ್ದರು. ಟೋಲ್ ಗೇಟ್ ಹೋರಾಟದ ಮುಂಚೂಣಿಯಲ್ಲಿದ್ದ 16 ಮಂದಿ ಹೋರಾಟಗಾರರಿಗೆ ನೋಟೀಸ್ ನೀಡಲಾಗಿದೆ.

Congress leader Pratibha Kulai
ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಆಕ್ರೋಶ

By

Published : Oct 16, 2022, 4:53 PM IST

ಸುರತ್ಕಲ್(ದಕ್ಷಿಣ ಕನ್ನಡ): ಸುರತ್ಕಲ್​ನ ಎನ್​ಐಟಿಕೆ ಟೋಲ್ ಗೇಟ್ ವಿರುದ್ಧ ಅಕ್ಟೋಬರ್ 18ಕ್ಕೆ ನಡೆಯುವ ಹೋರಾಟದ ಹಿನ್ನೆಲೆಯಲ್ಲಿ ರಾತ್ರಿ ಬಂದು ತಮ್ಮ ಮನೆಗೆ ನೋಟಿಸ್ ನೀಡಿರುವ ಪೊಲೀಸರ ಕ್ರಮಕ್ಕೆ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೇಸ್​ಬುಕ್ ಪೋಸ್ಟ್​ನಲ್ಲಿ ಅಕ್ರೋಶ ವ್ಯಕ್ತಪಡಿಸಿರುವ ಪ್ರತಿಭಾ ಕುಳಾಯಿ ಅವರು ಬಿಜೆಪಿ ಎಂಎಲ್‌ಎ, ಎಂಪಿ ಅವರು ಸುರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಂತಿದೆ. ಅ18 ರ ಟೋಲ್ ಗೇಟ್ ಹೋರಾಟವನ್ನು ಹತ್ತಿಕ್ಕಲು ನನ್ನ ಮನೆಗೆ ಮಧ್ಯರಾತ್ರಿ ಪೊಲೀಸರನ್ನು ಕಳುಹಿಸಿ ನೋಟಿಸ್ ನೀಡಿರುವ ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು. ನಾನೊಬ್ಬ ಸಾಮಾಜಿಕ ಕಾರ್ಯಕರ್ತೆಯೇ ಹೊರತು ಉಗ್ರಗಾಮಿ ಅಲ್ಲ ಎಂದು ಹೇಳಿದರು.

ನಾನೊಬ್ಬ ಭಾರತ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಈ ದೇಶದ ಕಾನೂನನ್ನು ಗೌರವಿಸುತ್ತೇನೆ. ನಿನ್ನೆ ಮಧ್ಯರಾತ್ರಿ ಸುರತ್ಕಲ್ ಠಾಣೆಯ 5 ಮಂದಿ ಪೊಲೀಸರು 11.45ಕ್ಕೆ ಕುಳಾಯಿಯಲ್ಲಿರುವ ನನ್ನ ಮನೆಗೆ ಬಂದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ಸಂದರ್ಭದಲ್ಲಿ ನನ್ನ ಮನೆಯಲ್ಲಿ 74 ವರ್ಷ ಪ್ರಾಯದ ನನ್ನ ಅತ್ತೆ ಇದ್ದು, ಪೊಲೀಸರ ನಡವಳಿಕೆಯಿಂದ ಭಯಭೀತರಾಗಿದ್ದರು. ನಾನು ಮನೆಯಲ್ಲಿ ಇರದ ಕಾರಣ ನೋಟಿಸ್ ಪಡೆದುಕೊಂಡಿಲ್ಲ. ನನ್ನ ಪ್ರಶ್ನೆ ಏನೆಂದರೆ ಮಂಗಳೂರು ನಿಜಕ್ಕೂ ಸುರಕ್ಷಿತವೇ? ಮಂಗಳೂರಿನಲ್ಲಿ ಮಹಿಳೆಯರು ಸುರಕ್ಷಿತರೇ? ಮಹಿಳೆಯರು ಇರುವ ಮನೆಗೆ ಯಾರು ಬೇಕಾದರೂ ಮಧ್ಯರಾತ್ರಿ ಬಂದು ಬಾಗಿಲು ತಟ್ಟಬಹುದೇ? ಇದೆಂತಾ ಪ್ರಜಾಪ್ರಭುತ್ವ? ಎಂದು ಬರೆದಿದ್ದಾರೆ.

ಟೋಲ್ ಗೇಟ್ ಹೋರಾಟಗಾರರ ಮನೆಗೆ ಶನಿವಾರ ರಾತ್ರಿ ಪೊಲೀಸರು ತೆರಳಿ ನೋಟಿಸ್ ಜಾರಿ ಮಾಡಿದ್ದರು. ಟೋಲ್ ಗೇಟ್ ಹೋರಾಟದ ಮುಂಚೂಣಿಯಲ್ಲಿದ್ದ 16 ಮಂದಿ ಹೋರಾಟಗಾರರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ಕಾಂಗ್ರೆಸ್ ಮುಖಂಡೆ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಮನೆಗೂ ಪೊಲೀಸರು ನೋಟಿಸ್ ನೀಡಲು ಹೋಗಿದ್ದರು. ಮಹಿಳೆಯೊಬ್ಬರ ಮನೆಗೆ ಪೊಲೀಸರು ರಾತ್ರಿ ನೋಟಿಸ್ ನೀಡಲು ಹೋಗಿರುವುದು ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರು, ಟೋಲ್ ಗೇಟ್ ವಿರೋಧಿ ಹೋರಾಟಗಾರರು ಮಾಡಿರುವ 'ನೇರ ಕಾರ್ಯಾಚರಣೆ' ಎಂಬ ಪದ ಪ್ರಯೋಗದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮದ ಅವಶ್ಯಕತೆಯನ್ನು ಸೂಚಿಸುತ್ತದೆ. ಸುರತ್ಕಲ್ ಟೋಲ್ ಗೇಟ್ ವಿರೋಧಿ ಆಂದೋಲನದಲ್ಲಿ ಭಾಗವಹಿಸುವ ಪ್ರಮುಖರು ಕೆಲವು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕೆಲ ಮುಖಂಡರನ್ನು ಮೇಲೆ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ ಕಾರ್ಯನಿರ್ವಾಹಕರಾಗಿರುವ ಡಿಸಿಪಿ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರ ಖಾಸಗಿತನವನ್ನು ಗೌರವಿಸಬೇಕು. ಆದ್ದರಿಂದ ಪೊಲೀಸರು ತಡರಾತ್ರಿ ಮನೆಗೆ ತೆರಳಿ ನೋಟಿಸ್ ಜಾರಿ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಸಿಪಿ ಉತ್ತರ ಮಹೇಶ್ ಕುಮಾರ್ ಅವರಿಗೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ 2 ಹೋವರ್‌ ಕ್ರಾಫ್ಟ್‌ ಪಾಕ್ ಗಡಿಗೆ.. ಕಮಾಂಡರ್ ಮನೋಜ್ ವಿ ಬಾಡ್ಕರ್

ABOUT THE AUTHOR

...view details