ಮಂಗಳೂರು:ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟಿಯನ್ನು 6 ತಿಂಗಳು ಬಂದ್ ಮಾಡಲು ಹೋಗಿ ಕೇಂದ್ರ ಬಿಜೆಪಿ ಸರ್ಕಾರ ವಿಶ್ವದಾಖಲೆ ನಿರ್ಮಿಸಲು ಹೊರಟಿದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ವ್ಯಂಗ್ಯವಾಡಿದರು.
'ಶಿರಾಡಿ ಘಾಟಿ ರಸ್ತೆಯನ್ನು 6 ತಿಂಗಳು ಮುಚ್ಚಿ ಬಿಜೆಪಿ ವಿಶ್ವದಾಖಲೆ ಮಾಡಲು ಹೊರಟಿದೆ' - ಬಿಜೆಪಿ ವಿರುದ್ಧ ಮಂಜುನಾಥ್ ಭಂಡಾರಿ ಆಕ್ರೋಶ
ಎಂಆರ್ಪಿಎಲ್, ಎನ್ಎಂಪಿಟಿ ಬಂದರು ಇರುವ ಮಂಗಳೂರಿನಿಂದ ರಾಜ್ಯ ರಾಜಧಾನಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿದರೆ ಆರ್ಥಿಕ ವಹಿವಾಟಿನ ಮೇಲೆ ಹೊಡೆತ ಬೀಳಲಿದೆ. ಜನಸಾಮಾನ್ಯರು ಇದರಿಂದಾಗಿ ಸಂಕಷ್ಟ ಎದುರಿಸಲಿದ್ದಾರೆ ಎಂದು ಮಂಜುನಾಥ್ ಭಂಡಾರಿ ತಿಳಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್ಎಚ್ಎಐನವರು 10 ಕಿ.ಮೀ ರಸ್ತೆ ಕಾಮಗಾರಿಗಾಗಿ ಶಿರಾಡಿ ಘಾಟಿಯನ್ನು 6 ತಿಂಗಳುಗಳ ಕಾಲ ಮುಚ್ಚುವಂತೆ ಆದೇಶ ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದು ಗಮನಕ್ಕೆ ಬಂದಿದೆ. ಈ ಹಿಂದೆಯೂ ಎರಡು ಬಾರಿ ಶಿರಾಡಿಯನ್ನು ಮುಚ್ಚಲಾಗಿತ್ತು. ಎಂಆರ್ಪಿಎಲ್, ಎನ್ಎಂಪಿಟಿ ಬಂದರು ಇರುವ ಮಂಗಳೂರಿನಿಂದ ರಾಜ್ಯ ರಾಜಧಾನಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿದರೆ ಆರ್ಥಿಕ ವಹಿವಾಟಿನ ಮೇಲೆ ಹೊಡೆತ ಬೀಳಲಿದೆ. ಜನಸಾಮಾನ್ಯರು ಇದರಿಂದಾಗಿ ಸಂಕಷ್ಟ ಎದುರಿಸಲಿದ್ದಾರೆ. ಆರು ತಿಂಗಳು ಮುಚ್ಚುವುದರಿಂದ ಸಮಸ್ಯೆಯಾಗಲಿದೆ ಎಂದರು.
ಇತ್ತೀಚಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ಮಿಸಿ ಇಲಾಖೆ ಮೂರು ವಿಶ್ವದಾಖಲೆ ಮಾಡಿದೆ ಎಂದು ಹೇಳಿದ್ದಾರೆ. ಇದೀಗ 10 ಕಿ.ಮೀ ರಸ್ತೆಯನ್ನು ಆರು ತಿಂಗಳುಗಳ ಕಾಲ ಬಂದ್ ಮಾಡಿ ವಿಶ್ವದಾಖಲೆ ಮಾಡಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.