ಪುತ್ತೂರು(ದಕ್ಷಿಣ ಕನ್ನಡ): ನಮ್ಮ ದೇಶದಲ್ಲಿ ಸುಮಾರು 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದೇಶಕ್ಕೆ ಬೇಕಾಗುವಷ್ಟು ಅಡಕೆ ಬೆಳೆಯಲಾಗುತ್ತಿದ್ದರೂ ಇದೀಗ ಭೂತಾನ್‍ನಿಂದ ಅಡಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ದೇಶದ ಅಡಕೆ ಬೆಳೆಗಾರರ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಕೇಂದ್ರ ಸರ್ಕಾರ ವಿಮರ್ಶೆ ಮಾಡಬೇಕಾದ ಅಗತ್ಯವಿದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಂಗಳವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಅಡಕೆ ಬೆಳೆಯನ್ನೇ ನೆಚ್ಚಿಕೊಂಡಿರುವ ದ. ಕ ಜಿಲ್ಲೆಯಲ್ಲಿ ರಬ್ಬರ್, ತೆಂಗು, ಕೊಕ್ಕೊ, ಬಾಳೆ ಮುಂತಾದ ಉಪಬೆಳೆಯನ್ನೂ ಮಾಡಲಾಗುತ್ತಿದೆ. ಪ್ರಸ್ತುತ ಅಡಕೆ ದರ ಹಿಂದೆಗಿಂತಲೂ ಎರಡು ಪಟ್ಟು ಜಾಸ್ತಿಯಾಗಿದ್ದರೂ, ರಾಸಾಯನಿಕ ಗೊಬ್ಬರ, ಕೂಲಿ ದರದಲ್ಲಿ ಮೂರ್ನಾಲ್ಕು ಪಟ್ಟು ಜಾಸ್ತಿಯಾಗಿದೆ.
ರೈತರು ಆತಂಕದ ಪರಿಸ್ಥಿತಿಯಲ್ಲಿದ್ದಾರೆ:ಪರಿಣಾಮ ಅಡಕೆ ದರದಲ್ಲಿ ಏರಿಕೆಯಾದರೂ ಜಿಲ್ಲೆಯ ಆರ್ಥಿಕ ಸುಧಾರಣೆ, ಅಡಕೆ ರೈತರಿಗೆ ಪ್ರಯೋಜನವಿಲ್ಲದಂತಾಗಿದೆ. ಈ ನಡುವೆ ಅಡಕೆ ಆಮದಿನಿಂದಾಗಿ ರೈತರು ಆತಂಕದ ಪರಿಸ್ಥಿತಿಯಲ್ಲಿದ್ದಾರೆ. ಇಷ್ಟೆಲ್ಲಾ ಆದರೂ ಮುಖ್ಯಮಂತ್ರಿಗಳು, ಜಿಲ್ಲೆಯ ಸಂಸದರು, ಶಾಸಕರು ಈ ವಿಚಾರದಲ್ಲಿ ಚಕಾರವೆತ್ತುತ್ತಿಲ್ಲ. ಈ ವಿಚಾರದಲ್ಲಿ ಅವರ ನಿಲುವು ಏನು? ಎಂಬುದು ಗೊತ್ತಾಗುತ್ತಿಲ್ಲ. ಇದನ್ನು ಜನಸಾಮಾನ್ಯರು ಪ್ರಶ್ನಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.