ಮಂಗಳೂರು:ಓಲೈಕೆ ರಾಜಕಾರಣದ ಮಾನಸಿಕತೆಯೇ ದೇಶ ವಿಭಜನೆಗೆ ಕಾರಣ. ಇಂಥ ಮಾನಸಿಕತೆ ಅಪಾಯಕಾರಿ. ಇದು ಕೋಮುವಾದಿ ರಾಜಕೀಯ ನೀತಿಯ ಪ್ರತ್ಯಕ್ಷ ದರ್ಶನ. ಹೀಗಾಗಿ ಕಾಂಗ್ರೆಸ್ ನಿಜವಾದ ಕಮ್ಯುನಲ್ ಪಾರ್ಟಿ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.
ಮಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ದೇಶ, ರಾಜ್ಯದ ಸಂಪತ್ತು ಬಡವರಿಗೆ, ಭಾರತೀಯರಿಗೆ ಸೇರಲಿ ಎಂದು ಏಕೆ ಹೇಳಿಲ್ಲ?. ಓಲೈಕೆ ರಾಜಕಾರಣ, ಓಟ್ ಬ್ಯಾಂಕ್ಗಾಗಿ ಮುಸ್ಲಿಂ ಸಮುದಾಯಕ್ಕೆ ದೇಶದ ಸಂಪತ್ತಿನಲ್ಲಿ ಪಾಲಿದೆ ಎಂದು ಹೇಳುತ್ತಾರೆ. ದೇಶದ ಸಂಪತ್ತಿನ ಮೊದಲ ಹಂಚಿಕೆ ಬಡವರಿಗೆ ಆಗಲಿ ಎಂದರು.
ಸಿದ್ಧಗಂಗಾ ಮಠದಲ್ಲಿ ಗುರುಭವನದ ಉದ್ಘಾಟನೆಗೆ ಬಿಜೆಪಿಯವರನ್ನು ಕರೆಯಲಾಗಿದೆ. ಹಾಗೆಯೇ ಆ ಜಿಲ್ಲೆಯ ಕಾಂಗ್ರೆಸ್ ನಾಯಕರನ್ನೂ ಕರೆದಿದ್ದಾರೆ. ಕೇವಲ ಕಾಂಗ್ರೆಸ್‌ನವರನ್ನೇ ಕರೆದಿದ್ದಾರೆ ಅನ್ನೋದು ತಪ್ಪು ಮಾಹಿತಿ. ನನಗೂ ಕಾರ್ಯಕ್ರಮದ ಆಮಂತ್ರಣವಿದೆ. ಜಿಲ್ಲೆಯ ಉಸ್ತುವಾರಿ ಸಚಿವ ಜಿ.ಪರಮೇಶ್ವರ್, ರಾಜಣ್ಣ ಅದೇ ಜಿಲ್ಲೆಯವರು ಎಂದು ಕರೆದಿದ್ದಾರೆ ಎಂದು ಸಿ.ಟಿ.ರವಿ ತಿಳಿಸಿದರು.