ಬೆಳ್ತಂಗಡಿ/ಮಂಗಳೂರು : ವರ್ಷಾನುಗಟ್ಟಲೇ ಬಾಕಿ ಇರಿಸಿಕೊಂಡಿರುವ ಸಾರ್ವಜನಿಕ ಕಡತಗಳನ್ನು ತಕ್ಷಣ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ನಿಯೋಗ ಮಂಗಳವಾರ ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್‌ಗೆ ಮನವಿ ಮಾಡಿತು.
ಮಿನಿ ವಿಧಾನಸೌಧದಲ್ಲಿ ಸಹಾಯಕ ಕಮಿಷನರ್ ಅವರನ್ನು ಭೇಟಿಯಾದ ನಿಯೋಗ, 94ಸಿ ಯೋಜನೆಯಡಿ ತಯಾರಾದ ಸುಮಾರು ಒಂದು ಸಾವಿರ ಹಕ್ಕು ಪತ್ರಗಳನ್ನು ತಕ್ಷಣ ಫಲಾನುಭವಿಗಳಿಗೆ ನೀಡಬೇಕು. ಎಪಿಎಲ್ ಪಡಿತರ ಚೀಟಿ ಸರಂಡರ್ ಮಾಡಿದ ಜನರಿಂದ ಪಡೆದುಕೊಂಡ ದಂಡದ ಹಣವನ್ನು ತಕ್ಷಣ ವಾಪಸ್ ನೀಡಲು ಕ್ರಮ ಕೈಗೊಳ್ಳಬೇಕು. ಬಾಕಿ ಉಳಿದ ಕಡತಗಳ ವಿವರವನ್ನು ತಹಶಿಲ್ದಾರ್‌ಗೆ ನೀಡಿ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡದಿರುವ ನಿಯಮವನ್ನು ಸಡಿಲಗೊಳಿಸಬೇಕು, ಅಕ್ರಮ-ಸಕ್ರಮ ಯೋಜನೆಯಡಿ ಮಂಜೂರಾದ ಸ್ಥಿರಾಸ್ತಿಗಳ ಬಗ್ಗೆ ಮರು ತನಿಖೆಯಾಗಬೇಕು ಎಂದು ತಹಶೀಲ್ದಾರ್ ಹೇಳುತ್ತಿದ್ದು, ಇದನ್ನು ನಿಲ್ಲಿಸಿ ತಕ್ಷಣ ಹಕ್ಕುಪತ್ರ ನೀಡಬೇಕು, ದೃಢೀಕರಣ ನಕಲು ಕೋರಿ ನೀಡದ ಅರ್ಜಿಗಳನ್ನು ನೀಡದೇ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ, ಇದನ್ನು ತಕ್ಷಣ ಸರಿಪಡಿಸಬೇಕು, ತಾಲೂಕು ಕಚೇರಿಗೆ ಅರ್ಜಿ ನೀಡಲು ಬಂದಾಗ ಅದನ್ನು ವಾಪಾಸ್ ನೀಡುತ್ತಿದ್ದಾರೆ, ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿತು.