ಪುತ್ತೂರು (ದಕ್ಷಿಣ ಕನ್ನಡ): ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಬಹಿರಂಗ ಪ್ರಚಾರಕ್ಕೆ ಇನ್ನೆರಡೇ ದಿನದಲ್ಲಿ ತೆರೆ ಬೀಳಲಿದೆ. ಈ ನಡುವೆ ಆಯಾ ಪಕ್ಷಗಳ ರಾಜ್ಯ ರಾಷ್ಟ್ರೀಯ ನಾಯಕರಿಂದ ಅಭ್ಯರ್ಥಿಗಳ ಪರ ಪ್ರಚಾರ ಭರಾಟೆ ಜೋರಾಗಿದೆ. ಇಂದು ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತರಪ್ರದೇಶ ಯೋಗಿ ಆದಿತ್ಯನಾಥ್ ಅವರು ಭರ್ಜರಿ ಮತಬೇಟೆ ನಡೆಸಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬೃಹತ್ ರೋಡ್ ಶೋ ಕೈಗೊಳ್ಳುವ ಮೂಲಕ ಚುನಾವಣಾ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡ ರೋಡ್ ಶೋ ಮಾರುಕಟ್ಟೆ ರಸ್ತೆಯ ಮೂಲಕ ಕಿಲ್ಲೆ ಮೈದಾನದಲ್ಲಿ ಸಮಾಪ್ತಿಗೊಂಡಿತು.
ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕನ್ನಡದಲ್ಲಿ ತಮ್ಮ ಭಾಷಣ ಆರಂಭಿಸಿದರು, ಪುತ್ತೂರಿನ ಮುತ್ತಿನಂತ ಜನರಿಗೆ ನನ್ನ ನಮಸ್ಕಾರಗಳು.. ಪುತ್ತೂರಿನ ನಿಮ್ಮೆಲ್ಲರಿಗೂ ಹೃದಯ ಪೂರ್ವಕ ಅಭಿನಂದನೆಗಳು. ಮರ್ಯಾದಾ ಪುರುಷೋತ್ತಮ ರಾಮನ ಜನ್ಮಭೂಮಿಯಿಂದ ಹನುಮಂತನ ಜನ್ಮಭೂಮಿ ಕರ್ನಾಟಕಕ್ಕೆ ಬಂದಿದ್ದೇನೆ. ಸಾವಿರ ವರ್ಷದ ಹಿಂದೆ ರಾಮನ ವನವಾಸದ ಸಮಯದಲ್ಲಿ ರಾಮನ ಅಂತಿಮ ದಿನದವರೆಗೆ ಇದ್ದವನು ಹನುಮಂತ. ಅಯೋಧ್ಯಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಆಗುತ್ತಿದೆ ಎಂದು ಹೇಳಿದ್ರು.
ಕರ್ನಾಟಕದ ಬಿಜೆಪಿ ಸರ್ಕಾರ ಕೂಡ ಅಂಜನಾದ್ರಿಯ ದೇವಸ್ಥಾನ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಜನರ ನಂಬಿಕೆ ಮೇಲೆ ಪ್ರಹಾರ ಮಾಡುತ್ತಿದೆ. ರಾಮ ಕಾಲ್ಪನಿಕ ಎಂದು ಕಾಂಗ್ರೆಸ್ ಹೇಳಿಕೊಂಡು ಬರುತ್ತಿದೆ. ಕಾಂಗ್ರೆಸ್ ಹನುಮಂತನ ನಾಡಿನಲ್ಲಿ ಬಜರಂಗದಳ ನಿಷೇಧದ ಬಗ್ಗೆ ಹೇಳುತ್ತಿದೆ. ಭಯೋತ್ಪಾದನೆ ಮಾಡುವ ಪಿಎಫ್ಐ ಗೆ ಮುಕ್ತ ಅವಕಾಶ ನೀಡುವ ಬಗ್ಗೆ ಮಾತ್ರ ಮಾತನಾಡುತ್ತಿದೆ ಎಂದು ಆರೋಪಿಸಿದರು.
ರಾಮಜನ್ಮಭೂಮಿ ಅಂದೋಲನದ ಸಮಯದಲ್ಲಿ ಒಂದು ಜೈಕಾರ ಹಾಕಿದ್ದೆವು. ಅದೇ ಜೈಕಾರವನ್ನು ಇಂದು ನನ್ನ ಜತೆ ನೀವೆಲ್ಲರೂ ಹಾಕಬೇಕು. ಈ ಜೈಕಾರದಲ್ಲಿ ಭಜರಂಗಿ ಹರ ಹರ ಎಂದ ಘೋಷಣೆ ಕೂಗಿದರು. ಬಜರಂಗದಳ ದೇಶದ ಸಾಂಸ್ಕೃತಿಕ ಸಂಘಟನೆ. ದೇಶದ ಸಂಸ್ಕೃತಿಯ ಜತೆ ಬೆಸೆದುಕೊಂಡಿರುವ ಸಂಘಟನೆ. ಮೋದಿ ನೇತೃತ್ವದಲ್ಲಿ ಭಾರತ ಜಗತ್ತಿನಲ್ಲೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದ್ರು.
ಕರ್ನಾಟಕದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದರೆ ಕಾಂಗ್ರೆಸ್, ಜೆಡಿಎಸ್ ರಾಜ್ಯದ ಅಭಿವೃದ್ಧಿಗೆ ತಡೆಯೊಡ್ಡುತ್ತಿವೆ. ಟೀಂ ಇಂಡಿಯಾದ ಲೀಡರ್ ರೀತಿ ಮೋದಿ ಇದ್ದು, ಕರ್ನಾಟಕ ರಾಜ್ಯದ ಜನತೆ ಅವರೊಂದಿಗೆ ನಿಲ್ಲಬೇಕಿದೆ ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಮತ್ತೆ ಮತದಾರರು ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವಾದ ಮಾಡಬೇಕಿದೆ. ಪುತ್ತೂರಿನ ಜನತೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಗೆ ಜನತೆ ಕೈಜೋಡಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಇದನ್ನೂಓದಿ:ಭಜರಂಗಬಲಿಯೇ ಬೇರೆ, ಬಜರಂಗ ದಳವೇ ಬೇರೆ.. ನಾವು ಹನುಮನ ನಿಜವಾದ ಭಕ್ತರು: ಜೈರಾಮ್ ರಮೇಶ್