ಪುತ್ತೂರು: ಹೊರ ದೇಶದಿಂದ ಹಾಗೂ ಹೊರ ರಾಜ್ಯಗಳಿಂದ ಬರುವ ಜನತೆಗೆ ಪುತ್ತೂರು ತಾಲೂಕಿನಲ್ಲಿ ಖಾಸಗಿ ವಸತಿ ಗೃಹ, ಹಾಸ್ಟೆಲ್, ಶಾಲೆಗಳಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಪುತ್ತೂರು ನಗರವ್ಯಾಪ್ತಿಯಲ್ಲಿ 12 ಖಾಸಗಿ ವಸತಿ ಗೃಹಗಳ ವ್ಯವಸ್ಥೆ ಮಾಡಲಾಗಿದೆ. ಹಾಸ್ಟೆಲ್ ಮತ್ತು ಶಾಲೆಗಳಲ್ಲಿ 3,094 ಮಂದಿಯ ಕ್ವಾರಂಟೈನ್‌ಗೆ ಸಂಪೂರ್ಣ ತಯಾರಿ ಮಾಡಲಾಗಿದೆ ಎಂದು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.
ಈಗಾಗಲೇ ಪುತ್ತೂರು ತಾಲೂಕಿನ ನರಿಮೊಗ್ರು ಹೆಣ್ಣುಮಕ್ಕಳ ಹಾಸ್ಟೆಲ್ನಲ್ಲಿ ಮಹಾರಾಷ್ಟ್ರದಿಂದ ಬಂದಿರುವ 5 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇದರಲ್ಲಿ ಇಬ್ಬರು ಕಡಬ ತಾಲೂಕಿಗೆ, ಒಬ್ಬರು ಸುಳ್ಯ ತಾಲೂಕಿಗೆ ಹಾಗೂ ಇಬ್ಬರು ಪುತ್ತೂರು ತಾಲೂಕಿಗೆ ಸೇರಿದವರಾಗಿದ್ದಾರೆ. ಇವರಿಗೆ ಊಟ ಮತ್ತಿತರ ಸೌಲಭ್ಯ ಒದಗಿಸಲಾಗಿದೆ. ಮನೆಯಿಂದ ಊಟ ತರುವುದಕ್ಕೂ ಅವಕಾಶ ನೀಡಲಾಗಿದೆ. ಆದರೆ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ.