ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ವಿವಾದ ಮತ್ತೆ ವಿಕೋಪಕ್ಕೆ ತಿರುಗಿದ್ದು, ಘಟನೆ ವರದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳ ಮೇಲೆ ಕೆಲ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾಗಿದ್ದರು ಎಂದು ಆರೋಪಿಸಿ ಪತ್ರಕರ್ತರು ದೂರು ದಾಖಲಿಸಿದ್ದರು. ಇದಕ್ಕೆ ವಿರುದ್ಧವಾಗಿ ವಿದ್ಯಾರ್ಥಿಗಳು ಸಹ ಪ್ರತಿ ದೂರು ನೀಡಿದ್ದು, ಉಪ್ಪಿನಂಗಡಿ ಪೊಲೀಸರು ಮೂವರು ಪತ್ರಕರ್ತರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ.
ಗುರುವಾರ ಬೆಳಗ್ಗೆ ಹಿಜಾಬ್ ವಿಚಾರವಾಗಿ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ಹಿನ್ನೆಲೆ ಕಾಲೇಜಿನ ಪ್ರಾಂಶುಪಾಲರಿಂದ ಮಾಹಿತಿ ಪಡೆಯುವ ಸಲುವಾಗಿ ಪತ್ರಕರ್ತರು ಸ್ಥಳಕ್ಕೆ ತೆರಳಿ ನಂತರ ಅವರ ಬೈಟ್ ಪಡೆದು ಹಿಂದಿರುಗುತ್ತಿದ್ದಾಗ ಇಬ್ಬರು ಕನ್ನಡ ದೃಶ್ಯ ಮಾಧ್ಯಮ ವರದಿಗಾರರನ್ನು ಕೆಲವು ವಿದ್ಯಾರ್ಥಿಗಳು ತಡೆದು, ಹಲ್ಲೆ ಮಾಡಿ ಅವರಿಗೆ ದಿಗ್ಬಂಧನ ವಿಧಿಸಿ, ಕ್ಯಾಮರಾ ಕಿತ್ತು ಅದರಲ್ಲಿದ್ದ ವಿಡಿಯೋ ಹಾಗೂ ಫೋಟೋಗಳನ್ನು ಡಿಲಿಟ್ ಮಾಡಿದ್ದರು.
25 ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರಕರಣ ದಾಖಲಿಸಿದ್ದರು. ಆದರೆ, ಪತ್ರಕರ್ತರು ದೂರು ನೀಡಿದ ಸಂದರ್ಭದಲ್ಲಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಲು ಮೀನಮೇಷ ಎಣಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಧ್ಯಪ್ರವೇಶದ ಬಳಿಕ ಈ ಬಗ್ಗೆ ದೂರು ದಾಖಲಾಗಿತ್ತು.