ಕರ್ನಾಟಕ

karnataka

ETV Bharat / state

ತೆಂಗಿನಮರ ಹತ್ತುವುದು ಗೊತ್ತಿದ್ದರೆ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸಬಹುದು! - ತೆಂಗಿನಮರ ಹತ್ತುವ ತರಬೇತಿ

ಮಂಗಳೂರಿನ ಎಕ್ಕೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೆಂಗಿನ ಮರ ಹತ್ತುವ ಆಸಕ್ತಿಯುಳ್ಳವರಿಗೆ ಉಚಿತ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ 200 ಕ್ಕೂ ಅಧಿಕ ಮಂದಿ ತರಬೇತಿ ಪಡೆದಿದ್ದಾರೆ.

coconut-tree-climbing-training
ತೆಂಗಿನ ಮರ ಹತ್ತುವ ತರಬೇತಿ

By

Published : Jan 19, 2023, 10:50 PM IST

Updated : Jan 19, 2023, 11:03 PM IST

ತೆಂಗಿನಮರ ಹತ್ತುವ ತರಬೇತಿ

ಮಂಗಳೂರು:ಕಂಪನಿಯಲ್ಲಿ ಕೆಲಸ ಮಾಡಿದರೆ ತಿಂಗಳಿಗೆ ಸರಾಸರಿ 20 ರಿಂದ 30 ಸಾವಿರ ದುಡಿಯಬಹುದು. ಆದರೆ, ತೆಂಗಿನಮರ ಹತ್ತುವ ಕಾಯಕ ಗೊತ್ತಿದ್ದರೆ ತಿಂಗಳಿಗೆ ಒಂದು ಲಕ್ಷ ರೂ ವರೆಗೆ ದುಡಿಯಬಹುದು. ಹೀಗೆ ದುಡಿಯುವ ಆಸಕ್ತಿ ಇರುವವರಿಗೆ ಮಂಗಳೂರಿನಲ್ಲಿ ಉಚಿತ ತರಬೇತಿ ನೀಡಲಾಗುತ್ತಿದೆ.

ತೆಂಗಿನಮರ ಹತ್ತುವುದು ಎಂದರೆ ಸ್ವಲ್ಪ ತ್ರಾಸದಾಯಕ. ಆದರೆ ಮನಸ್ಸು ಮಾಡಿದರೆ ತೆಂಗಿನಮರ ಹತ್ತುವುದು ಸುಲಭಸಾಧ್ಯ. ಹೀಗೆ ಸುಲಭ ಸಾಧ್ಯ ಎಂದು ಕೊಂಡವರು ತಿಂಗಳಿಗೆ ಲಕ್ಷ ರೂ ವರೆಗೆ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರಿನ ಎಕ್ಕೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೆಂಗಿನ ಮರ ಹತ್ತುವ ಆಸಕ್ತಿಯುಳ್ಳವರಿಗೆ ಇದೀಗ ಉಚಿತ ತರಬೇತಿ ನೀಡಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತೆಂಗಿನಮರ ಹತ್ತುವ ತರಬೇತಿ ನಡೆಯುತ್ತಿದ್ದು, ಈಗಾಗಲೇ 200 ಕ್ಕೂ ಅಧಿಕ ಮಂದಿ ತರಬೇತಿ ಪಡೆದಿದ್ದಾರೆ.

ತೆಂಗಿನ ಮರ ಹತ್ತುವ ತರಬೇತಿ ಪಡೆದವರಲ್ಲಿ ಹಲವು ಮಂದಿ ತೆಂಗಿನ ಮರ ಹತ್ತುವ ಕಾಯಕವನ್ನು ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಒಂದು ತೆಂಗಿನ ಮರದಿಂದ ಕಾಯಿ ಕೀಳಲು 45 ರಿಂದ 50 ರೂ ದರ ಇದ್ದರೆ ನಗರ ಪ್ರದೇಶದಲ್ಲಿ ನೂರು ರೂಪಾಯಿ ಇದೆ. ತೆಂಗಿನ ಮರ ಹತ್ತುವ ಟ್ರೈನಿಂಗ್ ಆದವರು ದಿನಕ್ಕೆ 80 ತೆಂಗಿನ ಮರ ಹತ್ತಲು ಸಾಧ್ಯವಿದೆ. ಹೀಗೆ ಅವರು ದಿನಕ್ಕೆ 3 ಸಾವಿರದಿಂದ 4 ಸಾವಿರದವರೆಗೆ ದುಡಿಯುತ್ತಾರೆ. ತಿಂಗಳಿಗೆ ಕನಿಷ್ಠ ಒಂದು ಲಕ್ಷ ರೂ ವರೆಗೆ ದುಡಿಯಲು ಸಾಧ್ಯವಾಗುತ್ತಿದೆ.

ಯಂತ್ರದ ಮೂಲಕ ಮರವೇರುವ ವ್ಯವಸ್ಥೆ : ತೆಂಗಿನಮರ ಹತ್ತುವುದು ಎಂದರೆ ಸುಲಭದ ಕೆಲಸವಲ್ಲ. ಹಿಂದೆ ಕಾಲಿಗೆ ಹಗ್ಗ ಕಟ್ಟಿ ಮರವೇರುತ್ತಿದ್ದರು. ಇದೀಗ ಯಂತ್ರದ ಮೂಲಕ ಮರವೇರುವ ವ್ಯವಸ್ಥೆ ಇದೆ. ಎರಡೂ ಕಾಲಿಗೆ ಬಲ ನೀಡುವ ಯಂತ್ರವನ್ನು ಮರಕ್ಕೆ ಕಟ್ಟಿ ಕಾಲಿನ ಮೂಲಕ ಯಂತ್ರಗಳು ಮೇಲೆ ಕೆಳಗೆ ಹೋಗುತ್ತವೆ. ಇದರ ಸಹಾಯದಿಂದ ತೆಂಗಿನಮರ ಹತ್ತಲು ಸಾಧ್ಯವಾಗುತ್ತಿದೆ. ಮಂಗಳೂರು ಕೃಷಿ ವಿಜ್ಞಾನ ಕೇಂದ್ರದಿಂದ ತೆಂಗಿನ ಮರ ಹತ್ತುವ ತರಬೇತಿ ಪಡೆದವರಿಗೆ ಈ ಯಂತ್ರವನ್ನು ಉಚಿತವಾಗಿ ನೀಡಲಾಗುತ್ತದೆ.

ಈ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ.ರಶ್ಮಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ತೆಂಗಿನಮರ ಹತ್ತುವ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಆರು ದಿನಗಳ ಕಾಲ ಈ ತರಬೇತಿ ಕಾರ್ಯಕ್ರಮ ಇರಲಿದೆ. ಇದರಲ್ಲಿ 20 ತರಬೇತುದಾರರು ಭಾಗವಹಿಸಲಿದ್ದಾರೆ. ಈ ಬಾರಿ ಐದು ಮಹಿಳೆಯರು ತರಬೇತಿಗೆ ಬಂದಿದ್ದಾರೆ. ಈ ಹಿಂದೆಯೂ ಆರು ತರಬೇತಿ ಶಿಬಿರವನ್ನು ಮಾಡಲಾಗಿತ್ತು. ಇದರಲ್ಲಿ 150 ಮಂದಿ ತರಬೇತಿ ಪಡೆದಿದ್ದರು. ಅವರು ದಿನಕ್ಕೆ 3 ರಿಂದ 4 ಸಾವಿರ ಆದಾಯವನ್ನು ಗಳಿಸುತ್ತಿದ್ದಾರೆ.

ನಿರುದ್ಯೋಗಿ ಯುವಕ, ಯುವತಿಯರಿಗೆ ಅನುಕೂಲ: ಇದು ನಿರುದ್ಯೋಗಿ ಯುವಕ, ಯುವತಿಯರಿಗೆ ಅನುಕೂಲವಾದ ತರಬೇತಿಯಾಗಿದೆ. ಇಷ್ಟೆಲ್ಲ ಆದಾಯ ಬರುವ ಈ ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರ ಉಚಿತವಾಗಿ ನೀಡುತ್ತಿದೆ. ಜೊತೆಗೆ ವಸತಿ ವ್ಯವಸ್ಥೆ, ಮರ ಹತ್ತುವ ಯಂತ್ರವನ್ನು ಉಚಿತವಾಗಿ ನೀಡುತ್ತಿದೆ. ಇವರಿಗೆ ಪ್ರಮಾಣ ಪತ್ರದ ಜೊತೆಗೆ ಒಂದು ವರ್ಷಕ್ಕೆ ಇನ್ಸೂರೆನ್ಸ್ ಕೂಡ ನೀಡಲಾಗುತ್ತದೆ. ಥಿಯರಿ ಕ್ಲಾಸ್ ಮತ್ತು ಪ್ರಾಕ್ಟಿಕಲ್ ಕ್ಲಾಸ್ ನೀಡಿ ಇವರಿಗೆ ತೆಂಗಿನ ಮರ ಹತ್ತುವುದನ್ನು, ಕಾಯಿ ಕೀಳುವುದನ್ನು ಕಲಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆಂಗು ಮರ ಹತ್ತುವವರಿಗೆ ಬೇಡಿಕೆ ಇರುವುದರಿಂದ ಈ ಬಾರಿ ನಾಲ್ಕು ಬ್ಯಾಚ್​ಗಳಲ್ಲಿ ತರಬೇತಿ ನಡೆಯಲಿದೆ ಎಂದು ಹೇಳಿದರು.

ತರಬೇತಿ ಪಡೆಯಲು ಬಂದಿದ್ದ ಸಂಧ್ಯಾ ಎಂಬುವವರು ಮಾತನಾಡಿ ನಾನು ಏನಾದರೂ ಸ್ವ ಉದ್ಯೋಗ ಮಾಡಬೇಕೆಂದು ಈ ತರಬೇತಿಗೆ ಬಂದಿದ್ದೇನೆ. ತೆಂಗಿನಮರ ಹತ್ತಲು ಇನ್ನೊಬ್ಬರನ್ನು ಕಾಯಬೇಕಾಗುತ್ತದೆ. ನಮ್ಮ ಮನೆಯ ಸೀಯಾಳ ತೆಗೆಯಬೇಕಾದರೂ ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಆದರೆ ಇದು ಕಲಿತರೆ ಅದರ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ:ಬೈಸ್ಕೈನಲ್ಲಿ ಪ್ರತಿಯೊಬ್ಬರೂ ಹಾರಾಟ ಮಾಡಿ ಆನಂದಿಸಿ: ಡಿ ಸಿ ಪವನ್​ಕುಮಾರ್

Last Updated : Jan 19, 2023, 11:03 PM IST

ABOUT THE AUTHOR

...view details