ಮಂಗಳೂರಿಗೆ ಬಂದಿದೆ ಕೋಬ್ರಾ ಬೈಕ್ ಮಂಗಳೂರು: ಬಂದರು ನಗರಿ ಮಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಅಧಿಕವಾಗುತ್ತಿದೆ. ನಗರದಲ್ಲಿ ವಾಹನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟ್ರಾಫಿಕ್ ಸಮಸ್ಯೆಯೂ ಆರಂಭಾಗಿದೆ. ಈ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಮಂಗಳೂರು ನಗರ ಪೊಲೀಸರು ಹೊಸ ಪ್ರಯೋಗವೊಂದನ್ನು ಮಾಡಿದ್ದಾರೆ.
ಟ್ರಾಫಿಕ್ ನಿರ್ವಹಣೆ ಸಂಚಾರಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಈ ಸಮಸ್ಯೆಯ ಪರಿಹಾರಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿನೂತನ ಬೈಕ್ ಸೇವೆಯನ್ನು ಅನುಷ್ಠಾನಗೊಳಿಸಲಾಗಿದೆ. ಟ್ರಾಫಿಕ್ ಕಿರಿಕಿರಿಯ ಉಪಶಮನಕ್ಕೆ ಜೊತೆಗೆ ಅಪಘಾತ ನಡೆದ ಸಂದರ್ಭ ಟ್ರಾಫಿಕ್ ಪೊಲೀಸರ ತುರ್ತು ಸ್ಪಂದನೆಗೆ ವಿಶೇಷ ರೀತಿಯ ಬೈಕ್ ಸೇವೆಯನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಜಾರಿಗೊಳಿಸಿದ್ದಾರೆ.
ಈ ಬೈಕ್ ಸೇವೆಯ ಹೆಸರು ಕೋಬ್ರಾ ಬೈಕ್ ಸೇವೆ. ಸದ್ಯ ಕೋಬ್ರಾ ಹೆಸರಿನ ಕೆಂಪು ಬಣ್ಣದ ನಾಲ್ಕು ಬೈಕ್ಗಳನ್ನು ಟ್ರಾಫಿಕ್ ಪೊಲೀಸರಿಗೆ ನೀಡಲಾಗಿದೆ. ಈ ಬೈಕ್ಗಳಿಗೆ ತುರ್ತಾಗಿ ಸ್ಪಂದಿಸುವ ಟಾರ್ಗೆಟ್ ನೀಡಲಾಗಿದೆ. ಬೈಕ್ನಲ್ಲಿ ಸೈರನ್ ವ್ಯವಸ್ಥೆ ಮತ್ತು ಮೈಕ್ ಸೆಟಪ್ ಕೂಡ ಇರಲಿದೆ. ಯಾವುದೇ ಪ್ರದೇಶದಲ್ಲಿ ಟ್ರಾಫಿಕ್ ದಟ್ಟಣೆಯಾಗಿದ್ದಲ್ಲಿ ಆ ಜಾಗವನ್ನು ಕೂಡಲೇ ತಲುಪುವ ಗುರಿ ಇರಿಸಲಾಗಿದೆ.
ರಸ್ತೆಯಲ್ಲಿ ಅಥವಾ ನೋ ಪಾರ್ಕಿಂಗ್ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದರಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದ್ದಲ್ಲಿ ಕೋಬ್ರಾ ಬೈಕ್ ತಕ್ಷಣ ಅಲ್ಲಿಗೆ ತೆರಳಿ ಕ್ರಮ ವಹಿಸುತ್ತದೆ. ಫುಟ್ಪಾತ್ನಲ್ಲಿ ವಾಹನ ಪಾರ್ಕ್ ಮಾಡಿದ್ದಲ್ಲಿ ತೆರವು ಮಾಡುವುದು ಹೀಗೆ ನಗರದಾದ್ಯಂತ ಈ ಕೋಬ್ರಾ ಬೈಕ್ಗಳು ಎಲ್ಲ ಕಡೆ ಸಂಚರಿಸುತ್ತಿರುತ್ತದೆ. ಅಗತ್ಯ ಬಿದ್ದಲ್ಲಿ ವ್ಹೀಲ್ ಲಾಕ್ ಹಾಕಿ ಕ್ರಮ ಜರುಗಿಸುವ ವ್ಯವಸ್ಥೆಯೂ ಇರಲಿದೆ.
ಅದಲ್ಲದೇ ವಿಐಪಿ ವಾಹನ ಅಥವಾ ಆಂಬ್ಯುಲೆನ್ಸ್ ಬರುತ್ತಿದ್ದಲ್ಲಿ ರಸ್ತೆ ತೆರವು ಮಾಡಿ, ಗ್ರೀನ್ ಕಾರಿಡಾರ್ ನಿರ್ಮಿಸುವ ಕೆಲಸವನ್ನೂ ಈ ಕೋಬ್ರಾಗಳಿಗೆ ವಹಿಸಲಾಗಿದೆ. ಒಟ್ಟಿನಲ್ಲಿ ಟ್ರಾಫಿಕ್ ಸಮಸ್ಯೆಗಳಿಗೆ ಕಡಿವಾಣ ಹಾಕಲು ಕೋಬ್ರಾ ಬೈಕ್ಗಳ ಸೇವೆ ಸಹಕಾರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಈ ಬೈಕ್ ಸೈರನ್ ಮತ್ತು ಮೈಕ್ ಸೆಟಪ್ ಹೊಂದಿರುತ್ತದೆ. ಯಾವುದೇ ಟ್ರಾಫಿಕ್ ಘಟನೆ ಮತ್ತು ಅಪಘಾತ ಸಂದರ್ಭದಲ್ಲಿ ತಕ್ಷಣ ಧಾವಿಸುತ್ತದೆ. ಈ ಬೈಕ್ನಲ್ಲಿ ಇರುವ ಟ್ರಾಫಿಕ್ ಪೊಲೀಸರು ಪಾರ್ಕಿಂಗ್ ಅನ್ನು ಸುಗಮಗೊಳಿಸುತ್ತಾರೆ. ಮತ್ತು ವ್ಹೀಲ್ ಕ್ಲ್ಯಾಂಪ್ ಇತ್ಯಾದಿಗಳನ್ನು ತ್ವರಿತವಾಗಿ ಹಾಕುವ ಮೂಲಕ ತಪ್ಪು ಪಾರ್ಕಿಂಗ್ ವಿರುದ್ಧ ಕ್ರಮ ತೆಗೆದುಕೊಳ್ಳಲಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಂದ ಫುಟ್‌ಪಾತ್ ಮುಕ್ತಗೊಳಿಸುವತ್ತ ಗಮನ ಹರಿಸುವುದು ಮಾಡಲಿದೆ.
ಈ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಟ್ರಾಫಿಕ್ ವ್ಯವಸ್ಥೆಗೆ ನಾಲ್ಕು ದ್ವಿಚಕ್ರ ವಾಹನಗಳನ್ನು ನೀಡಿದ್ದೇವೆ. ಬೆಳಗ್ಗೆ ಟ್ರಾಫಿಕ್ ಆರಂಭವಾಗಿ ರಾತ್ರಿ ಟ್ರಾಫಿಕ್ ಮುಗಿಯುವವರೆಗೆ ಅವರಿಗೆ ನೀಡಲಾದ ಪ್ರದೇಶದಲ್ಲಿ ನಿರಂತರ ಗಸ್ತು ಮಾಡಲಿದ್ದಾರೆ. ಈ ವೆಹಿಕಲ್ನಲ್ಲಿ ಸೈರನ್ ಮತ್ತು ಮೈಕ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಈಗಾಗಲೇ ಮಂಗಳೂರು ನಗರದಲ್ಲಿ ನಾಲ್ಕು ಬೈಕ್ಗಳ ಮೂಲಕ ಕೋಬ್ರಾ ಸೇವೆ ಆರಂಭವಾಗಿದೆ. ಇದರ ಯಶಸ್ಸಿನ ಮೇಲೆ ಇನ್ನಷ್ಟು ಬೈಕ್ಗಳ ಮೂಲಕ ಸೇವೆ ನೀಡುವ ಆಲೋಚನೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರಿಗೆ ಇದೆ. ಈ ಸೇವೆ ಯಶಸ್ಸು ಆಗಲಿದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ:ಮಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಹೊಸ ಪ್ರಯೋಗ: ಮೂರು ಕಡೆ ಮಾರ್ಗ ಬದಲಾವಣೆ