ಮೂಡುಬಿದಿರೆ: ಸೋನಿ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ 'ಇಂಡಿಯನ್ ಐಡಲ್' ಸಿಂಗಿಂಗ್ ರಿಯಾಲಿಟಿ ಶೋ ಸ್ಪರ್ಧೆ ಇದೀಗ ಅಂತಿಮ ಹಂತ ತಲುಪಿದೆ. ಅಂತಿಮ ಕಣಕ್ಕೆ ಮೂಡುಬಿದಿರೆಯ ಕಡಲಕೆರೆ ಪರಿಸರದವರಾದ ನಿಹಾಲ್ ತಾವ್ರೋ ಆಯ್ಕೆಯಾಗಿದ್ದಾರೆ. ಒಟ್ಟು 6 ಮಂದಿ ಪ್ರಶಸ್ತಿಗಾಗಿ ಸೆಣಸುತ್ತಿದ್ದು, ಈ ಅವಕಾಶ ಪಡೆದ ಕರ್ನಾಟಕದ ಮೊದಲ ಗಾಯಕರಾಗಿದ್ದಾರೆ ನಿಹಾಲ್ ತಾವ್ರೊ.
ನಿಹಾಲ್ 3ನೇ ತರಗತಿಯಲ್ಲಿರುವಾಗಲೇ ಆಲ್ಬಂ ಗೀತೆಯನ್ನು ಯಾವುದೇ ತರಬೇತಿ, ರಿಹರ್ಸಲ್ ಇಲ್ಲದೆ ಹಾಡಿ ನಿಬ್ಬೆರಗಾಗಿಸಿದ್ದರು. ಹೀಗೆ 'ಬೆಳೆಯುವ ಸಿರಿ ಮೊಳಕೆಯಲ್ಲಿ' ಎಂಬಂತೆ ಎಳವೆಯಲ್ಲಿಯೇ ಹಾಡಿನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಶಾಲಾ ದಿನಗಳಲ್ಲಿ ಪ್ರತಿಭಾ ಕಾರಂಜಿಯಲ್ಲದೇ ಹಲವು ಟಿವಿ ಶೋಗಳಲ್ಲಿ ಭಾಗವಹಿಸಿದ ನಿಹಾಲ್, ಆಳ್ವಾಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಅಲ್ಲಿ ಇವರ ಪ್ರತಿಭೆಗೆ ಇನ್ನಷ್ಟು ಪೂರಕ ವಾತಾವರಣ ದೊರೆಯಿತು.
ಬಹಳಷ್ಟು ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ನಿಹಾಲ್ ತಾವ್ರೊ, ಝೀ ಕನ್ನಡದ 'ಸರಿಗಮಪ' ಶೋನಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಇವರ ಕಂಠಸಿರಿಗೆ ಮನಸೋತ ನಾದಬ್ರಹ್ಮ ಹಂಸಲೇಖ ಅವರು “ನೀನು ನಿಹಾಲ್ ತಾವ್ರೋ ಅಲ್ಲಪ್ಪಾ ನಿಹಾಲ್ ದೇವ್ರು’' ಎಂದಿದ್ದರು. ಇನ್ನು ಗಾಯಕ ವಿಜಯ ಪ್ರಕಾಶ್ “ನಿಹಾಲ್ ಮುಂದೆ ವಿಶ್ವದ ಗಮನ ಸೆಳೆಯುವ ಗಾಯಕನಾಗುತ್ತಾನೆ" ಎಂದು ಶೋದಲ್ಲಿ ಭವಿಷ್ಯ ನುಡಿದಿದ್ದರು.
ಕನ್ನಡ, ತುಳು, ಕೊಂಕಣಿ ಸಹಿತ ಹಲವು ಸಿನೆಮಾಗಳಲ್ಲಿ ಹಾಡಿರುವ ಇವರು, 'ಜೊತೆ ಜೊತೆಯಲಿ', 'ನನ್ನರಸಿ ರಾಧೆ', 'ಯಾರಿವಳು', 'ಗಿಣಿರಾಮ' ಧಾರಾವಾಹಿಗಳ ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ. ಲವ್ ಮಾಕ್ಟೈಲ್ ಸಿನಿಮಾದಲ್ಲಿ ನೀನೆ ಎಂದಿಗೂ, ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ನಾ ಹುಡುಕುವ ನಾಳೆ, ತುಳುವಿನ ಗಿರ್‌ಗಿಟ್ ಸಿನಿಮಾಗಳಲ್ಲಿ ಹಾಡು ಹಾಡಿದ್ದಾರೆ. ಗಿರ್‌ಗಿಟ್ ತುಳು ಸಿನೆಮಾದ ಗೀತೆ "ಅರೆ ಗಾಲಡ್ ಮರುಭೂಮಿಡ್’ ಜನಪ್ರಿಯವಾಗಿದೆ. ಸಿನಿಮಾ, ಧಾರವಾಹಿ ಸೇರಿ ನೂರಕ್ಕೂ ಹೆಚ್ಚು ಹಾಡುಗಳನ್ನು ತಾವ್ರೋ ಹಾಡಿದ್ದಾರೆ.