ಮಂಗಳೂರು: ಮತ್ಸೋದ್ಯಮವೆ ಪ್ರಮುಖ ಉದ್ಯಮವಾಗಿರುವ ಕರಾವಳಿ ಜಿಲ್ಲೆ ಮಂಗಳೂರಿನ ಮೀನುಗಾರರು ಈ ಬಾರಿ ಮತ್ಸ್ಯ ಕ್ಷಾಮದಿಂದ ಭಾರಿ ಸಂಕಷ್ಟಕ್ಕೊಳಗಾಗಿದ್ದಾರೆ.
ಈ ಬಾರಿ ಮೀನುಗಾರಿಕೆ ಋತು ಆರಂಭದಲ್ಲಿಯೆ ಮೀನುಕ್ಷಾಮ ತಲೆದೋರಿದ್ದು, ಚಂಡ ಮಾರುತ, ವಿಪರೀತ ಸೆಕೆಯ ಪರಿಣಾಮಕ್ಕೆ ಮೀನುಗಳು ಮೀನುಗಾರರಿಗೆ ಸಿಗುತ್ತಿಲ್ಲ. ಚಂಡಮಾರುತದ ಪರಿಣಾಮ ಮೀನುಗಳು ಸಿಗದೇ ಇದ್ದರೆ , ಈ ಬಾರಿಯ ವಿಪರೀತ ಸೆಕೆಗೆ ಮೀನುಗಳು ಆಳಕ್ಕೆ ಹೋದ ಪರಿಣಾಮ ಮೀನುಗಳು ಬಲೆಗೆ ಹೆಚ್ಚಿನ ಪ್ರಮಾಣದಲ್ಲಿ ಬೀಳುತ್ತಿಲ್ಲ.
ಮತ್ಸ್ಯ ಕ್ಷಾಮದಿಂದ ಕಂಗಾಲಾದ ಕರಾವಳಿ ಮೀನುಗಾರರು ಕೋಟಿಗಟ್ಟಲೆ ಸಾಲ ಮಾಡಿ ಮೀನುಗಾರಿಕಾ ಬೋಟ್ ನಿರ್ಮಿಸಿ ಮೀನುಗಾರಿಕೆಗೆ ತೆರಳುವ ಮೀನುಗಾರರು ಸುಮಾರು ಹತ್ತು ದಿನಗಳ ಕಾಲ ಸಮುದ್ರದಲ್ಲಿ ಇದ್ದು ಮೀನುಗಾರಿಕೆ ನಡೆಸಿ ತೀರಕ್ಕೆ ಬರುವಾಗ ಸುಮಾರು ಆರು ಲಕ್ಷ ರೂ.ನಷ್ಟು ಖರ್ಚಾಗುತ್ತದೆ. ಆದರೆ ಅಷ್ಟು ಪ್ರಮಾಣದಲ್ಲಿ ಮೀನುಗಳು ಬಲೆಗೆ ಬೀಳದೇ ನಷ್ಟ ಒಂದೆಡೆಯಾದರೆ, ಮತ್ತೊಂದೆಡೆ ಬೋಟ್ಗೆ ಮಾಡಿದ ಸಾಲ ತೀರಿಸುವ ಹೊಣೆಗಾರಿಕೆ ಮೀನುಗಾರರನ್ನು ಸಂಕಷ್ಟಕ್ಕೆ ತಳ್ಳಿದೆ.
ಈ ಬಾರಿಯ ಮೀನುಗಾರಿಕಾ ಋತುವಿನಲ್ಲಿ ಮೀನುಗಳ ಕ್ಷಾಮದಿಂದ ಹೆಚ್ಚಿನ ಮೀನುಗಾರರು ಬೋಟ್ಗಳನ್ನು ಅವಧಿಗೆ ಮುಂಚೆಯೇ ಲಂಗರು ಹಾಕಿದ್ದಾರೆ. ಸಮುದ್ರದಲ್ಲಿ ಪ್ರಾಕೃತಿಕ ವಿಕೋಪ ಕಡಲ ಮಕ್ಕಳನ್ನು ಸಂಕಷ್ಟಕ್ಕೆ ತಳ್ಳಿದೆ.