ಮಂಗಳೂರು: ಭಾರತೀಯ ಕೋಸ್ಟ್ ಗಾರ್ಡ್ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಇಂದು ರಾಜ್ಯಪಾಲರ ಸಮ್ಮುಖದಲ್ಲಿ ಅರಬ್ಬಿ ಸಮುದ್ರದಲ್ಲಿ ಅಣಕು ಕಾರ್ಯಾಚರಣೆ ನಡೆಯಿತು. ಶತ್ರುಪಡೆ ಸಮುದ್ರ ಮಾರ್ಗವಾಗಿ ದೇಶದೊಳಗೆ ನುಸುಳಲು ಯತ್ನಿಸುವಾಗ ತಕ್ಷಣ ಕೋಸ್ಟ್ ಗಾರ್ಡ್ ಸಿಬ್ಬಂದಿ ನುಸುಳುಕೋರರನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸುವ ಅಣಕು ಪ್ರದರ್ಶನ ಇದಾಗಿತ್ತು. ಅಗ್ನಿ ಅವಘಡಕ್ಕೆ ತುತ್ತಾದ ಸೇನಾ ಬೋಟ್ ಅನ್ನು ತಕ್ಷಣ ನೀರು ಹಾಯಿಸಿ ನಂದಿಸುವ ಮತ್ತು ಈ ವೇಳೆ ಸಮುದ್ರಕ್ಕೆ ಬಿದ್ದ ಸೇನಾನಿಯನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ರಕ್ಷಿಸುವ ಕಾರ್ಯ ನಡೆಯಿತು. .
ಇದನ್ನೂ ಓದಿ:ಬಜೆಟ್: ರಾಜ್ಯದ ನಿರೀಕ್ಷೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ: ಸಿಎಂ ಬಸವರಾಜ ಬೊಮ್ಮಾಯಿ
ಇದಕ್ಕೂ ಮುನ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೋಸ್ಟ್ ಗಾರ್ಡ್ ದಿನಾಚರಣೆ ಉದ್ಘಾಟಿಸಿದರು. ಜಲಸೇನೆ ಸಮುದ್ರದಲ್ಲಿ ಯಾವ ರೀತಿ ಕಾರ್ಯಾಚರಣೆ ನಡೆಸುತ್ತದೆ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಅದರಲ್ಲೂ ಕೋಸ್ಟ್ ಗಾರ್ಡ್‌ನಲ್ಲಿ ಸೇವೆ ಸಲ್ಲಿಸುವ ಸೇನಾನಿಗಳ ಕುಟುಂಬಿಕರಿಗೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇದನ್ನು ಅವರು ತಿಳಿಯಬೇಕೆಂದು ಅವರನ್ನೂ ಸಮುದ್ರ ಮಧ್ಯೆ ಕರೆತರಲಾಗಿತ್ತು. ಕೋಸ್ಟ್ ಗಾರ್ಡ್ ಸಿಬ್ಬಂದಿಯ ಕಾರ್ಯಾಚರಣೆ ನೋಡಿ ಕುಟುಂಬದವರೇ ಸಂತಸ ಪಟ್ಟಿದ್ದಾರೆ.