ಮಂಗಳೂರು :ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿದ್ದರಿಂದ ನಗರದ ವಾಹನ ಸವಾರರು ಪರ್ಯಾಯ ಮಾರ್ಗ ಹುಡುಕುತ್ತಾ ಕೆಲವರು ಇಲೆಕ್ಟ್ರಿಕ್ ವಾಹನಕ್ಕೆ ಮೊರೆ ಹೋದ್ರೆ, ಮತ್ತೆ ಕೆಲವರು ಎಲ್ಪಿಜಿ, ಸಿಎನ್ಜಿ ಅಳವಡಿಕೆಗೆ ಮುಂದಾದ್ರು. ಆದ್ರೆ, ಇಂದು ಸಿಎನ್ಜಿ ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ ಮತ್ತೆ ವಾಹನ ಸವಾರರು ಪರದಾಡುವಂತಾಗಿದೆ.
ಸಿಎನ್ಜಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ಜಿ) ಮೂಲಕ ವಾಹನಗಳನ್ನು ಓಡಿಸಲು ಸಾಧ್ಯವಾದ ಹಿನ್ನೆಲೆ ಕೆಲವರು ಸಿಎನ್ಜಿಯನ್ನು ತಮ್ಮ ವಾಹನಗಳಿಗೆ ಅಳವಡಿಸಿದರು.
ಅದೇ ರೀತಿ ಮಂಗಳೂರಿನಲ್ಲಿಯೂ ಸಹ ಹಲವು ರಿಕ್ಷಾಗಳು, ಕಾರುಗಳಲ್ಲಿ ಸಿಎನ್ಜಿ ಕಿಟ್ ಅಳವಡಿಸಲಾಗಿದೆ. ಸದ್ಯ ಇದೆ ವಾಹನಸವಾರರಿಗೆ ಮುಳ್ಳಾಗಿದ್ದು, ಮಂಗಳೂರಿನಲ್ಲಿ ಸಿಎನ್ಜಿ ಪೂರೈಸುವ ಬಂಕ್ಗಳ ಕೊರತೆ ಹಿನ್ನೆಲೆ ಜನ ಪರದಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್, ಮುಲ್ಕಿ, ಹೊಸಬೆಟ್ಟು, ಹಳೆಯಂಗಡಿ ಮತ್ತು ಕಾವೂರುನಲ್ಲಿ ಮಾತ್ರ ಸಿಎನ್ಜಿ ಬಂಕ್ಗಳು ಇವೆ. ಇಲ್ಲಿ ಸಿಎನ್ಜಿ ಪೂರೈಕೆಯಾಗುವ ಸಮಯ ಕಾದು ವಾಹನ ಸವಾರರು ಕ್ಯೂನಲ್ಲಿ ಗಂಟೆಗಟ್ಟಲೆ ನಿಂತು ತಮ್ಮ ವಾಹನಗಳಿಗೆ ಗ್ಯಾಸ್ ತುಂಬಿಸುವ ಪರಿಸ್ಥಿತಿ ಬಂದಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ : ದ.ಕ.ದಲ್ಲಿ ವಾಹನಗಳಿಗೆ ಸಿಎನ್ಜಿ ಅಳವಡಿಸಿದ ಸವಾರರಿಗೆ ಸಂಕಷ್ಟ ದ.ಕ ಜಿಲ್ಲೆಯಲ್ಲಿ ಪ್ರಸ್ತುತ 600ಕ್ಕೂ ಅಧಿಕ ವಾಹನಗಳು ಸಿಎನ್ಜಿ ಕಿಟ್ ಅಳವಡಿಸಿಕೊಂಡಿವೆ. ಅವರಿಗೆ ಬೇಕಾದಷ್ಟು ಸಿಎನ್ಜಿ ಪೂರೈಕೆ ಯಾಗುತ್ತಿಲ್ಲ. ಇದರಿಂದ ಬೇಸತ್ತಿರುವ ಸಿಎನ್ಜಿ ಬಳಕೆದಾರರ ಸಂಘ ದಕ್ಷಿಣ ಕನ್ನಡದಲ್ಲಿ ಮದರ್ ಸ್ಟೇಷನ್ ಸ್ಥಾಪನೆಯಾಗಬೇಕೆಂಬುದು ಆಗ್ರಹಿಸಿದೆ.
ಸದ್ಯ ಜಿಲ್ಲೆಯಲ್ಲಿ ಇರುವ ಸಿಎನ್ಜಿ ವಾಹನಗಳಿಗೆ ಬೇಕಾದಷ್ಟು ಗ್ಯಾಸ್ ಲಭ್ಯವಾಗುತ್ತಿಲ್ಲ. ಇದರ ಮಧ್ಯೆ ಬೇರೆ ಜಿಲ್ಲೆಗಳಿಂದ ಬರುವ ಲಾರಿಗಳು ಇಲ್ಲಿಂದಲೇ ಸಿಎನ್ಜಿ ತುಂಬಿಸಿಕೊಂಡು ಹೋಗುತ್ತಿದೆ.
ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ಕಾದರೂ ವಾಹನಗಳಿಗೆ ಸಿಎನ್ಜಿ ಸಿಗುತ್ತದೆ ಎಂಬ ಖಾತರಿಯು ಇಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಿಎನ್ಜಿ ಮದರ್ ಸ್ಟೇಷನ್ ಆರಂಭದವರೆಗೂ ವಾಹನಗಳಿಗೆ ಸಿಎನ್ಜಿ ಅಳವಡಿಸುವುದನ್ನು ಮುಂದೂಡಿ ಎನ್ನುತ್ತಾರೆ ಸಿಎನ್ಜಿ ಬಳಕೆದಾರರು.