ಮಂಗಳೂರು:ಬರಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಇವತ್ತಿನವರೆಗೆ ಒಂದು ರೂಪಾಯಿ ಕೊಟ್ಟಿಲ್ಲ. ನಾವು ಎರಡು ಬಾರಿ ಮನವಿ ಕೊಟ್ಟೆವು. ಬರ ಪರಿಹಾರ ವೀಕ್ಷಣೆ ಮಾಡಲು ಕೇಂದ್ರದ ತಂಡ ಬಂದಿದೆ. ಪರಿಶೀಲನೆ ಮಾಡಿ 136 ತಾಲೂಕುಗಳಲ್ಲಿ 116 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದರು. ನಾವು 13,910 ಕೋಟಿ ರೂ. ಕೇಳಿದ್ದೇವೆ. 33,000 ಕೋಟಿ ಹಾನಿಯಾಗಿದೆ. ಇವತ್ತಿನವರೆಗೆ ಕೇಂದ್ರ ಸರ್ಕಾರ ನಯಾ ಪೈಸೆ ಕೊಟ್ಟಿಲ್ಲ. ಅಷ್ಟು ಮಾತ್ರವಲ್ಲದೆ ನಮ್ಮ ಮಂತ್ರಿಗಳು ಹೋದರೆ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಕೇಂದ್ರ ಸರಕಾರ ರಾಜ್ಯ ಸರಕಾರದ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿದೆ" ಎಂದರು.
ನಿಗಮ ಮಂಡಳಿ ನೇಮಕದ ಪ್ರಕ್ರಿಯೆ ಆಗುತ್ತಿದೆ. ಮೊದಲ ಹಂತದಲ್ಲಿ ಶಾಸಕರಿಗೆ ಚೇರ್ ಮೆನ್ ಮತ್ತು ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ, ಮಾಜಿ ಶಾಸಕರಿಗೆ ಕೊಡುತ್ತೇವೆ. ಅತಿ ಶೀಘ್ರದಲ್ಲಿ ನೇಮಕ ಆಗಲಿದೆ ಎಂದು ತಿಳಿಸಿದರು. ಹಾಗೆ ತನ್ನನ್ನು ಕಲೆಕ್ಷನ್ ಮಾಸ್ಟರ್ ಎಂದ ಶಾಸಕ ಹರೀಶ್ ಪೂಂಜಾ ಎಂಎಲ್ಎ ಆಗಿದ್ದು ಮೊನ್ನೆ. ನಾನು 1983 ರಲ್ಲಿ ಎಂಎಲ್ಎ ಆದೆ. 1985 ರಲ್ಲಿ ಮಂತ್ರಿ ಆದೆ. ಆದರೆ ಯಾರು ನನ್ನನ್ನು ಆ ರೀತಿ ಕರೆದಿಲ್ಲ. ಹರೀಶ್ ಪೂಂಜಾ ರಾಜಕೀಯದ ಬಚ್ಚ. ಅದನ್ನು ಬಿಜೆಪಿ ಸರಕಾರಕ್ಕೆ, ಬಿಜೆಪಿ ಮುಖ್ಯಮಂತ್ರಿಗಳಿಗೆ ಹೇಳಲಿ, ನಮಗಲ್ಲ ಎಂದು ತಿಳಿಸಿದರು.