ಕಡಬ (ದಕ್ಷಿಣಕನ್ನಡ) : ಶಾಲೆ ಬಳಿ ತಂಬಾಕು ಮಾರಾಟ ಮಾಡುತ್ತಿರುವ ಬಗ್ಗೆ ವಿದ್ಯಾರ್ಥಿನಿಯ ಪತ್ರಕ್ಕೆ ಸಿಎಂ ಕಚೇರಿ ಸ್ಪಂದಿಸಿದೆ. ಈ ಸಂಬಂಧ ಕಡಬ ತಾಲೂಕಿನ ಬಿಳಿನೆಲೆ ಕೈಕಂಬ ಶಾಲೆಯ ಬಳಿ ಇರುವ ಅಂಗಡಿ ಮೇಲೆ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೇ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ತಂಬಾಕು ಮತ್ತು ಸಿಗರೇಟ್ ಮುಂತಾದವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿನಿ ಪತ್ರಕ್ಕೆ ಸಿಎಂ ಕಚೇರಿ ಸ್ಪಂದನೆ :ಇಲ್ಲಿನ ಬಿಳಿನೆಲೆ ಕೈಕಂಬ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ತನ್ನ ಶಾಲೆಯ ಬಳಿ ಇರುವ ಅಂಗಡಿಯೊಂದರಲ್ಲಿ ತಂಬಾಕು ಮಾರಾಟ ಮಾಡುತ್ತಿರುವ ಬಗ್ಗೆ ದೂರಿದ್ದಳು. ಧಾರ್ಮಿಕ ಮತ್ತು ಶಾಲಾ ಕೇಂದ್ರಗಳ ಬಳಿ ತಂಬಾಕು ನಿಷೇಧ ಮಾಡಿರುವ ವಿಚಾರವನ್ನು ಪತ್ರಿಕೆಯ ಮೂಲಕ ಅಯೋರ ಅರಿತುಕೊಂಡಿದ್ದಳು. ಇದೇ ವಿಚಾರವಾಗಿ ತನ್ನ ಶಾಲೆಯ ಪಕ್ಕದಲ್ಲಿ ತಂಬಾಕು ಮಾರಾಟ ಮಾಡಲಾಗುತ್ತಿದೆ. ಇದರ ಪೊಟ್ಟಣಗಳು ಶಾಲೆಯ ಆವರಣದ ಸುತ್ತ ಬಿದ್ದಿರುತ್ತದೆ ಎಂದು ವಿದ್ಯಾರ್ಥಿನಿ ಪತ್ರವೊಂದನ್ನು ಬರೆದಿದ್ದಳು. ಇದು ಮುಖ್ಯಮಂತ್ರಿಗಳ ಕಚೇರಿಯ ಗಮನಕ್ಕೆ ಬಂದಿತ್ತು.
ಅಂಗಡಿಗೆ ದಾಳಿ ನಡೆಸಿದ ಪೊಲೀಸರು: ಮುಖ್ಯಮಂತ್ರಿಗಳ ಕಚೇರಿಯಿಂದ ಈ ಬಗ್ಗೆ ಆದೇಶ ಬಂದ ಕೂಡಲೇ ಕಡಬ ಪೊಲೀಸ್ ಠಾಣಾಧಿಕಾರಿ ಅಭಿನಂದನ್ ನೇತೃತ್ವದ ಪೊಲೀಸರ ತಂಡ ತಂಬಾಕು ಮಾರಾಟ ಅಂಗಡಿಗೆ ದಾಳಿ ನಡೆಸಿದೆ. ದಾಳಿ ವೇಳೆ ಕೈಕಂಬ ಶಾಲಾ ಬಳಿ ಇರುವ ಫ್ಯಾನ್ಸಿ ಮತ್ತು ಫೂಟ್ ವೇರ್ ಅಂಗಡಿಯಲ್ಲಿ ತಂಬಾಕು ಮತ್ತು ಸಿಗರೇಟ್ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಠಾಣಾಧಿಕಾರಿ ಅಭಿನಂದನ್ ಅವರು ಅಂಗಡಿ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಬಾಲಕಿಯ ತಾಯಿಯವರು ಠಾಣಾಧಿಕಾರಿಗಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಲಕಿ ಪತ್ರ :ನನ್ನ ಹೆಸರು .... ನಾನು ಕೈಕಂಬ ಶಾಲೆಯಲ್ಲಿ 3ನೆ ತರಗತಿ ಓದುತ್ತಿದ್ದೇನೆ. ಕಳೆದ ಸೆಪ್ಟೆಂಬರ್ 14ನೇ ತಾರೀಕು ಪತ್ರಿಕೆಯೊಂದರ ಮುಖಪುಟದಲ್ಲಿ ತಂಬಾಕು ನಿಷೇಧದ ಬಗ್ಗೆ ಬಂದ ವಿಷಯದ ಬಗ್ಗೆ ಓದಿದೆ. ಇದರಲ್ಲಿ ಶಾಲೆಯಿಂದ 100 ಮೀಟರ್ ದೂರದವರೆಗೆ ತಂಬಾಕು ಮಾರಾಟ ಮಾಡಬಾರದು ಎಂಬುದನ್ನು ತಿಳಿದುಕೊಂಡೆ. ಆದರೆ, ನನ್ನ ಶಾಲೆಯ ಪಕ್ಕದ ಅಂಗಡಿಯಲ್ಲಿ ತಂಬಾಕು ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಅದರ ಪ್ಯಾಕೆಟ್ಗಳು ಶಾಲೆಯ ಆವರಣದ ಸುತ್ತಮುತ್ತ ಬಿದ್ದಿರುತ್ತದೆ. ಆದ ಕಾರಣ ನಿಷೇಧದ ಆದೇಶದಿಂದ ಆಶ್ಚರ್ಯವಾಯಿತು ಎಂದು ವಿದ್ಯಾರ್ಥಿನಿ ಪತ್ರದಲ್ಲಿ ವಿವರಿಸಿದ್ದಳು.
ಇದನ್ನೂ ಓದಿ :ಎಷ್ಟೇ ರಾಜಕೀಯ ಶಕ್ತಿ ಹೊಂದಿದ್ದರೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ