ಮಂಗಳೂರು : ಸೋಮಣ್ಣ ಮತ್ತು ಯಡಿಯೂರಪ್ಪ ಅವರದ್ದು ತಂದೆ ಮಗನ ಸಂಬಂಧ. ಸೋಮಣ್ಣ ಅವರು ದೆಹಲಿಗೆ ವೈಯಕ್ತಿಕ ಕಾರಣದಿಂದ ಹೋಗಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳೂರಿನಲ್ಲಿ ಆಯೋಜಿಸಲಾದ ಫಲಾನುಭವಿಗಳ ಸಭೆಗೆ ಆಗಮಿಸಿದ ವೇಳೆ ಮೇರಿಹಿಲ್ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಅವರು, ಸೋಮಣ್ಣ ಅವರಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಡಿಯೂರಪ್ಪ ಅವರು ಎಲ್ಲರಿಗಿಂತ ಉನ್ನತ ನಾಯಕ. ಸೋಮಣ್ಣ ಅವರಿಗೆ ಯಾರೊಂದಿಗೂ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಕುಡಿಯುವ ನೀರಿನ ವಿಚಾರವಾಗಿ ಟಾಸ್ಕ್ ಫೋರ್ಸ್ ಮಾಡಲಾಗಿದೆ. ನೀರಿಗಾಗಿ ಕೆಲವು ಕಡೆ ತುಂಬಾ ಸಮಸ್ಯೆಗಳಿವೆ. ಕೆಲವು ಭಾಗದಲ್ಲಿ ಬೋರ್ವೆಲ್ ಗಳು ಬತ್ತಿ ಹೋಗಿವೆ. ಈ ಬಗ್ಗೆ ವರದಿ ತರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ವಿಚಾರದಲ್ಲಿ ಟೋಲ್ ಸಂಗ್ರಹಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿರುವ ಬಗ್ಗೆ ಮಾತನಾಡಿ, ಕಾಂಗ್ರೆಸ್ನವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಟೋಲ್ ಆಗಿಲ್ವಾ. ಕೆಟ್ಟ ಪರಂಪರೆ ಕಾಂಗ್ರೆಸ್ನದ್ದು. ಸಮಸ್ಯೆ ಇದ್ದರೆ ಕುಳಿತು ಬಗೆಹರಿಸಿಕೊಳ್ಳಬಹುದು. ಕಾಂಗ್ರೆಸ್ ಸಭ್ಯತೆಯ ದಿವಾಳಿತನ ತೋರಿಸಿದೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ನಿಂದ ಗ್ಯಾರಂಟಿ ಕಾರ್ಡ್ ವಿತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಗ್ಯಾರಂಟಿ ಕಾರ್ಡ್ ಗಾಗಿ ಯಾಕೆ ಹತಾಶೆ ಆಗಬೇಕು. ಕಾಂಗ್ರೆಸ್ ಏನು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಜನರೇ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇವರ ಮಾತಿಗೆ ಗ್ಯಾರಂಟಿ ಇಲ್ವಾ? ಗ್ಯಾರಂಟಿ ಕಾರ್ಡ್ ಯಾಕೆ ಕೊಡಬೇಕು. ಗ್ಯಾರಂಟಿ ಕಾರ್ಡ್ ಅದು ಜಸ್ಟ್ ವಿಸಿಟಿಂಗ್ ಕಾರ್ಡ್ ಎಂದು ಲೇವಡಿ ಮಾಡಿದರು.