ಮಂಗಳೂರು:ಅಧಿಕಾರ ಸ್ವೀಕರಿಸಿದ ನಾಲ್ಕೇ ಗಂಟೆಗಳಲ್ಲಿ ಘೋಷಿಸಲಾದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯು ಅನ್ನದಾತರ ಮಕ್ಕಳಿಗೆ ತಲುಪಿರುವುದು ಅತ್ಯಂತ ನೆಮ್ಮದಿ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರೈತ ವಿದ್ಯಾನಿಧಿ ಫಲಾನುಭವಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು ವಿದ್ಯಾರ್ಥಿಗಳು ವಿದ್ಯಾನಿಧಿ ಯೋಜನೆಯ ಸದುಪಯೋಗ ಪಡೆದುಕೊಂಡಿರುವುದನ್ನು ತಿಳಿದು ನನ್ನ ಶಕ್ತಿ ಇಮ್ಮಡಿಯಾಗಿದೆ. ಹಿಂದೆ ಹೆಚ್ಚುತ್ತಿರುವ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕ ಎಂದು ಹೇಳಲಾಗುತ್ತಿತ್ತು. ಆದರೆ, ಪ್ರಧಾನಮಂತ್ರಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ 130 ಕೋಟಿ ಜನರು, ಅದರಲ್ಲೂ ಶೇ. 46 ರಷ್ಟಿರುವ ಯುವಜನರು ನಮ್ಮ ದೇಶವನ್ನು ಮುನ್ನಡೆಸುವ ಶಕ್ತಿಯಾಗಿದ್ದಾರೆ ಎಂದು ಸಿಎಂ ಹೇಳಿದರು.
‘ನಿಮ್ಮ ವಯಸ್ಸು ವಿದ್ಯಾರ್ಜನೆ ಮಾಡುವ, ಆಟ-ಪಾಠದಲ್ಲಿ ತೊಡಗಿಸಿಕೊಳ್ಳುವ ವಯಸ್ಸಾಗಿದೆ. ಜಗತ್ತನ್ನು ತಿಳಿದುಕೊಳ್ಳುವ ವಯಸ್ಸಾಗಿದೆ. ಆದ್ದರಿಂದ ನೀವು ತಾರ್ಕಿಕ ಚಿಂತನೆ ಮಾಡಿ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಕಂಡುಕೊಳ್ಳಬೇಕು. ತಾರ್ಕಿಕ ಚಿಂತನೆಯಿಂದ ಉನ್ನತ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ' ಎಂದು ಅವರು ಹೇಳಿದರು.
“ನನ್ನ ಹಣೆಬರಹವನ್ನು ನಾನೇ ಬರೆಯುತ್ತೇನೆ”; ತಂದೆ-ತಾಯಿಗಳ ಕನಸುಗಳನ್ನು ನನಸು ಮಾಡುತ್ತೇನೆ ಎಂದು ನಿಮ್ಮ ಕೋಣೆಯ ಗೋಡೆಯಲ್ಲಿ ಬರೆದಿಡಿ. ಅದನ್ನು ಈಡೇರಿಸಲು ಅದಕ್ಕೆ ತಕ್ಕಂತೆ ಹೆಚ್ಚಿನ ಪರಿಶ್ರಮವನ್ನು ವಹಿಸಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಚಿವರಾದ ಆರ್. ಅಶೋಕ್, ಗೋವಿಂದ ಎಂ. ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಓದಿ:ಸಚಿವ ಬಿ.ಸಿ ನಾಗೇಶ್ ಮನೆಗೆ ನುಗ್ಗಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮ: ಸಿಎಂ ಬೊಮ್ಮಾಯಿ