ಸುಳ್ಯ: ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಲೆ ಪ್ರಕರಣವನ್ನು ಭೇದಿಸುವವರೆಗೆ ಅಕ್ಷರಶಃ ದಣಿವಿಲ್ಲದೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಅವರು ಇಂದು ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರವೀಣ್ ತಮ್ಮ ಕುಟುಂಬಕ್ಕೆ ಆಧಾರವಾಗಿದ್ದು, ಚಿಕನ್ ಅಂಗಡಿಯೇ ಆದಾಯದ ಮೂಲವಾಗಿತ್ತು. ಸರ್ಕಾರದ ವತಿಯಿಂದ ಪರಿಹಾರ ನಿಧಿಯಿಂದ 25 ಲಕ್ಷ ಪರಿಹಾರ ಹಾಗೂ ಭಾರತೀಯ ಜನತಾ ಪಕ್ಷದ ವತಿಯಿಂದ 25 ಲಕ್ಷಗಳನ್ನು ಪರಿಹಾರವಾಗಿ ನೀಡಲಾಗಿದೆ.
ಪ್ರವೀಣ್ ಕುಟುಂಬದವರಿಗೆ ಪಕ್ಷ ಮತ್ತು ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಅವರ ಜೀವನದ ಮುಂದಿನ ಭವಿಷ್ಯಕ್ಕೆ ಸಹಕಾರ ನೀಡಲಾಗುವುದು. ಪ್ರವೀಣ್ ಆತ್ಮಕ್ಕೆ ಕೊಲೆ ಮಾಡಿದವರಿಗೆ ಶಿಕ್ಷೆಯಾದಾಗ ಮಾತ್ರ ಶಾಂತಿ ದೊರಕಲಿದೆ ಎಂದರು.
ಪ್ರವೀಣ್ ಕುಟುಂಬದವರು ಇದೇ ಮಾತನ್ನು ಹೇಳಿದ್ದಾರೆ. ಇನ್ನೆಂದೂ ಈ ರೀತಿ ಯಾರಿಗೂ ಆಗಬಾರದು. ಇದರ ಹಿಂದಿರುವ ಸಂಘಟನೆಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಕಟುಕರಿಗೆ ಶಿಕ್ಷೆ ಆಗುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಿದೆ: ಇದೊಂದು ಪೂರ್ವಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಮೊನ್ನೆ ನಡೆದ ಪ್ರವೀಣ್ ಹತ್ಯೆ ಪ್ರಕರಣ ಖಂಡನೀಯ. ಕಳೆದ ಹತ್ತು ವರ್ಷಗಳಲ್ಲಿ ಈ ಭಾಗದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿದೆ. ಸಮಾಜಘಾತುಕ ಶಕ್ತಿಗಳು ಬೆಂಬಲ ನೀಡಿರುವುದರಿಂದ ನಿರ್ಬಿಡೆಯಿಂದ ಈ ಘಟನೆಯನ್ನು ನಡೆಸಲಾಗಿದೆ. ಇದನ್ನು ನಾವು ಕೊಲೆ ಪ್ರಕರಣವಾಗಿ ನೋಡುತ್ತಿಲ್ಲ. ದೇಶವನ್ನು ಛಿದ್ರ ಮಾಡುವ ಯೋಜನಾ ಬದ್ಧವಾದ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿದೆ. ತನಿಖೆ ಪ್ರಾರಂಭವಾಗಿದೆ ಎಂದರು.