ಮಂಗಳೂರು: ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ದೊಡ್ಡ ಪ್ರಮಾಣದ ಹೂಡಿಕೆ ಕರಾವಳಿಯಲ್ಲಿ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ಇಂಧನ ಮತ್ತು ಕಡಲನೀರಿನಿಂದ ಅಮೋನಿಯ ಉತ್ಪಾದನೆಗೆ ಸುಮಾರು ಎರಡು ಲಕ್ಷ ಕೋಟಿ ಬಂಡವಾಳ ಹೂಡಿಕೆಯ ನಿರೀಕ್ಷೆ ಇದೆ. ಹಸಿರು ಯೋಜನೆ ಉತ್ಪಾದನೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ತಯಾರಿ ನಡೆಸಲಾಗುತ್ತಿದೆ. ಈಗಾಗಲೇ 3 ನವೀಕರಿಸಬಹುದಾದ ಇಂಧನ ಕಂಪನಿಗಳೊಂದಿಗೆ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಬಹಳ ವೇಗದಲ್ಲಿ ಕೆಲಸಗಳಾಗುತ್ತಿದ್ದು, ಮಾರ್ಚ್, ಏಪ್ರಿಲ್ ವೇಳೆಗೆ ಕೆಲಸ ಪ್ರಾರಂಭ ಮಾಡುವುದಾಗಿ 2-3 ಕಂಪನಿಗಳು ತಿಳಿಸಿವೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಕರಾವಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೈಡ್ರೋಜನ್ ಹಾಗೂ ಅಮೋನಿಯಾ ಉತ್ಪಾದನೆಯ ಎರಡು ಪ್ರಮುಖ ಯೋಜನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರಲಿದೆ. ಗಲ್ಫ್ ದೇಶದಲ್ಲಿ ಮತ್ತು ಮಂಗಳೂರಿನಲ್ಲಿ ಇದು ತಲೆ ಎತ್ತಲಿದೆ.
ಮಂಗಳೂರಿನ ಆಸುಪಾಸಿನಲ್ಲಿ ಕಡಲ ನೀರಿನಿಂದ ಅಮೋನಿಯಾ ತಯಾರು ಮಾಡುವ ಪ್ರಮುಖ ಯೋಜನೆ ಬರಲಿದೆ. ನವೀಕರಿಸಬಹುದಾದ ಇಂಧನ ಘಟಕಕ್ಕೆ ಅಗತ್ಯ ವಿರುವ ಇಂಧನವನ್ನೂ, ನವೀಕರಿಸಬಹುದಾದ ಇಂಧನ ಮೂಲಗಳಾದ ಸೋಲಾರ್, ವಿಂಡ್ ಮಿಲ್ಗಳಿಂದಲೇ ಪಡೆಯಲಾಗುವುದು.