ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಎಸ್‌ಪಿ ರಾಹುಲ್ ಕುಮಾರ್ ಶಹಾಪುರವಾಡ್ ನೇತೃತ್ವದ ಸಿಐಡಿ ಪೊಲೀಸರ ತಂಡವು ಮಾಹಿತಿ ಸಂಗ್ರಹಣ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು ಗೋಲಿಬಾರ್ ಪ್ರಕರಣದ ಮಾಹಿತಿ ಕಲೆಹಾಕಲು ಮುಂದಾದ ಸಿಐಡಿ ಸಿಐಡಿ ಅಧಿಕಾರಿಗಳ ಒಂದು ತಂಡವು ನಿನ್ನೆ (ಡಿ. 26) ಮಂಗಳೂರಿಗೆ ಭೇಟಿ ನೀಡಿದ್ದು, ಗಲಭೆ ಹಾಗೂ ಗೋಲಿಬಾರ್ ನಡೆದ ಸ್ಥಳಗಳ ಮಾಹಿತಿ ಸಂಗ್ರಹ ಪರಿಶೀಲನೆ ಕಾರ್ಯದಲ್ಲಿ ತೊಡಗಿದೆ. ಆದರೆ, ಅಧಿಕೃತ ಆದೇಶ ಹೊರಬಿದ್ದ ಬಳಿಕವಷ್ಟೇ ನ್ಯಾಯಾಲಯದ ಮೂಲಕ ಪ್ರಕರಣದ ತನಿಖೆ ವಹಿಸಿಕೊಳ್ಳಲು ಈ ತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್‌ವಾಡ್ ನೇತೃತ್ವದ ತಂಡವು ಶುಕ್ರವಾರ ಸ್ಟೇಟ್ ಬ್ಯಾಂಕ್, ಬಂದರ್ ಸೇರಿದಂತೆ ನಗರದ ವಿವಿಧೆಡೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಕಲೆಹಾಕಿದೆ. ನಿಷೇಧಾಜ್ಞೆ ಉಲ್ಲಂಘನೆ, ಗಲಭೆ ಪ್ರಕರಣ, ಲಾಠಿಚಾರ್ಜ್, ಕಲ್ಲು ತೂರಾಟ ಸೇರಿದಂತೆ ಗೋಲಿಬಾರ್ ಘಟನೆ ನಡೆದಿರುವ ಸ್ಥಳಗಳನ್ನು ಸಿಐಡಿ ತಂಡ ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ.
ಸಿಐಡಿ ಎಸ್ಪಿ ರಾಹುಲ್ ಕುಮಾರ್ ಶಹಾಪುರ್‌ವಾಡ್ ನೇತೃತ್ವದ ತಂಡದಲ್ಲಿ ಐದು ಮಂದಿ ಸಿಐಡಿ ಅಧಿಕಾರಿಗಳಿದ್ದಾರೆ.