ಮಂಗಳೂರು:ತಡೆಗೋಡೆ ಕುಸಿತದಿಂದ ಮಣ್ಣಿನಡಿ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಗರದ ಕೂಳೂರಿನಲ್ಲಿ ನಡೆದಿದೆ.
ಚರ್ಚ್ ತಡೆಗೋಡೆ ಕುಸಿತ: ಸ್ಥಳದಲ್ಲಿಯೇ ಕಾರ್ಮಿಕ ಸಾವು ಉಮೇಶ್(37) ಮೃತ ಕಾರ್ಮಿಕ. ನಗರದ ಕೂಳೂರಿನ ಸಂತ ಅಂತೋನಿಯವರ ಚರ್ಚ್ ತಡೆಗೋಡೆ ಕುಸಿದಿದ್ದು, ಅಲ್ಲೇ ಸಮೀಪದ ಮನೆಯಲ್ಲಿ ಕಾಮಗಾರಿ ನಡೆಸುತ್ತಿದ್ದ ಉಮೇಶ್ ಮೃತಪಟ್ಟಿದ್ದಾರೆ. ಬೆಳಗ್ಗೆ 10.30 ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಮಳೆಯಿಂದ ಕಾಮಗಾರಿ ನಿರ್ವಹಿಸಲಾಗದೆ ಹಿಂದೆ ಹೋದವರು ತಿರುಗಿ ಬಂದು ಇನ್ನೇನು ಕಾಮಗಾರಿ ನಿರ್ವಹಿಸಬೇಕೆನ್ನುವಾಗ ಏಕಾಏಕಿ ತಡೆಗೋಡೆ ಕುಸಿತದಿಂದ ಮಣ್ಣಿನಡಿ ಸಿಲುಕಿ ಉಮೇಶ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರು ಕಾರ್ಮಿಕರು ಕೂದಳೆಯ ಅಂತರದಿಂದ ಪಾರಾಗಿದ್ದಾರೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ.
ಕಾಮಗಾರಿ ನಿರ್ವಹಿಸಲು ಬಂದಿರುವ ಇವರು, ಬೆಳಗ್ಗಿನಿಂದಲೇ ಮಳೆ ಸುರಿಯುತ್ತಿದ್ದು ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲು ಮಳೆ ಅಡ್ಡಿಯಾಗುತ್ತದೆ ಎಂದು ಹಿಂದೆ ತೆರಳಿದ್ದರು. ಆದರೆ ಅನತಿ ದೂರ ಸಾಗಿದಾಗ ಮಳೆ ಕೊಂಚ ಕಡಿಮೆಯಾದ ಕಾರಣ ಮರಳಿ ಕೆಲಸ ನಿರ್ವಹಿಸಲು ಹಿಂದೆ ಬಂದಿದ್ದಾರೆ. ಇನ್ನೇನು ಕಾಮಗಾರಿ ನಿರ್ವಹಿಸಲು ಆರಂಭ ಮಾಡಬೇಕೆನ್ನುವಾಗ ಏಕಾಏಕಿ ತಡೆಗೋಡೆ ಕುಸಿದಿದೆ. ಅಪಾಯದ ಮುನ್ಸೂಚನೆ ಅರಿತು ಮೂವರೂ ಅಲ್ಲಿಂದ ಪಾರಾಗಲು ಯತ್ನಿಸಿದ್ದಾರೆ. ಆದರೆ ಮೃತ ಉಮೇಶ್ ಅವರಿಗೆ ಅಲ್ಲಿಯೇ ಇದ್ದ ಸಣ್ಣ ಹೊಂಡದಲ್ಲಿ ಕಾಲು ಸಿಲುಕಿ ಓಡಲು ಆಗಿಲ್ಲ. ಅಷ್ಟು ಹೊತ್ತಿಗೆ ಮಣ್ಣು-ಕಲ್ಲು ಸಹಿತ ತಡೆಗೋಡೆ ಅವರ ಮೇಲೆಯೇ ಕುಸಿದು ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಕ್ಷಣ ಕಾವೂರು ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಮೃತದೇಹವನ್ನು ಮೇಲೆತ್ತಿದ್ದಾರೆ.