ಇಂದು ಡಿಸೆಂಬರ್ 25. ವಿಶೇಷತೆ ಏನು ಅಂತ ಬಿಡಿಸಿ ಹೇಳಬೇಕಿಲ್ಲ, ಯಾಕೆಂದರೆ ಕ್ರಿಸ್ಮಸ್ ಹಬ್ಬ. ಈ ದಿನವನ್ನು ಜಗತ್ತಿನಾದ್ಯಂತ ಅದ್ಧೂರಿಯಿಂದ ಆಚರಿಸಲಾಗುತ್ತದೆ. ಯೇಸುಕ್ರಿಸ್ತನ ಜನ್ಮದಿನದ ಆಚರಣೆಯೇ ಈ ಕ್ರಿಸ್ಮಸ್. ಪ್ರಪಂಚದಾದ್ಯಂತ ಹೆಚ್ಚು ಜನರು ಸಂತೋಷದಿಂದ ಆಚರಿಸುವ ಹಬ್ಬಗಳಲ್ಲಿ ಇದೂ ಒಂದು.
ಯೇಸುಕ್ರಿಸ್ತರ ಜನನ:ಕ್ರಿಸ್‌ಮಸ್ ಟ್ರೀ ಅಲಂಕಾರ, ಸ್ನೇಹಿತರು-ಬಂಧುಗಳಿಗೆ ಉಡುಗೊರೆ ನೀಡುವುದು, ಅತಿಥಿಗಳನ್ನು ಔತಣಕೂಟಗಳಿಗೆ ಆಹ್ವಾನಿಸುವುದು.. ಹೀಗೆ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಡಿ.25 ರಂದು ಗೋದಲಿಯೊಂದರಲ್ಲಿ ಯೇಸುಕ್ರಿಸ್ತನು ಬಡಗಿಯಾದ ತಂದೆ ಜೋಸೆಫ್ ಮತ್ತು ತಾಯಿ ಮೇರಿ ದಂಪತಿಯ ಸುಪುತ್ರನಾಗಿ ಬೆಥ್ಲೆಹೆಮ್ ಎಂಬಲ್ಲಿ ಜನಿಸಿದರು ಎಂಬುದು ಐತಿಹ್ಯ.
ಕ್ರಿಸ್‌ಮಸ್ ಇತಿಹಾಸ ತಿಳಿಯೋಣ:ಯೇಸುಕ್ರಿಸ್ತರ ಜನನದ ನಂತರ ಕ್ರಿಸ್ಮಸ್ ಆಚರಣೆ ಹುಟ್ಟಿಕೊಂಡಿತು. ಮೊದಲ ಕ್ರಿಸ್‌ಮಸ್ ಹಬ್ಬವನ್ನು ರೋಮ್‌ನಲ್ಲಿ ಕ್ರಿ.ಶ 336 ನಲ್ಲಿ ಆಚರಿಸಲಾಯಿತು. ಸುಮಾರು 300ರ ದಶಕದಲ್ಲಿ ಏರಿಯನ್ ವಿವಾದದಿಂದಾಗಿ ಕ್ರಿಸ್‌ಮಸ್ ಹಬ್ಬಾಚರಣೆಯನ್ನು ಬಹಳ ಸಮಯದವರೆಗೆ ನಿಲ್ಲಿಸಲಾಗಿತ್ತಂತೆ. ನಂತರದಲ್ಲಿ ಕ್ರಿ.ಶ.800ರ ಸುಮಾರಿಗೆ ಕ್ರಿಸ್‌ಮಸ್ ಇನ್ನಷ್ಟು ಜನರ ಗಮನ ಸೆಳೆಯಿತು. 1660 ಡಿಸೆಂಬರ್ 25 ಅನ್ನು ಕ್ರಿಸ್ಮಸ್ ರಜಾದಿನವನ್ನಾಗಿ ಪರಿಗಣಿಸಲಾಯಿತು. ಮತ್ತೆ 1900ರ ದಶಕದ ಆರಂಭದಲ್ಲಿ ಆಂಗ್ಲಿಕನ್ ಕಮ್ಯುನಿಯನ್ ಚರ್ಚ್‌ನ ಆಕ್ಸ್‌ಫರ್ಡ್ ಚಳವಳಿಯು ಕ್ರಿಸ್‌ಮಸ್‌ನ ಪುನರುಜ್ಜೀವನಕ್ಕೆ ಕಾರಣವಾಯಿತು.
ಕ್ರಿಸ್‌ಮಸ್ ಆಚರಣೆ ಹೇಗೆ?:ಹಲವು ಕಡೆಗಳಲ್ಲಿ ಕ್ರಿಸ್‌ಮಸ್ ಆಚರಣೆ ಸಿದ್ಧತೆಗಳು ಬಹಳ ವಿಭಿನ್ನವಾಗಿರುತ್ತವೆ. ಮನೆಗಳಲ್ಲಿ ಸ್ಟಾರ್, ಗೋದಲಿ ಮಾದರಿಗಳು ಮತ್ತು ಕ್ರಿಸ್ಮಸ್ ಟ್ರೀ ಇಟ್ಟು ಅಲಂಕರಿಸಲಾಗುತ್ತದೆ. ಹಲವು ಉಡುಗೊರೆಗಳನ್ನು ಕ್ರಿಸ್ಮಸ್ ಮರದ ಕೆಳಗೆ ಇರಿಸಲಾಗುತ್ತದೆ. ಈ ದಿನದಂದು ಅವುಗಳನ್ನು ತೆರೆಯಲಾಗುತ್ತದೆ ಮತ್ತು ಹಂಚುವ ದೃಶ್ಯಗಳು ಸಾಮಾನ್ಯ.
ಈ ದಿನದ ದಾನಕ್ಕಿದೆ ವಿಶೇಷ ಮಹತ್ವ:ಕ್ರಿಸ್ಮಸ್ ಸಂದರ್ಭದಲ್ಲಿ ದಾನ ಮಾಡುವುದಕ್ಕೂ ವಿಶೇಷ ಮಹತ್ವವಿದೆ. ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ದಾನಗಳನ್ನು ಮಾಡಬೇಕು. ಇಂಥ ಕಾರ್ಯಕ್ಕೆ ದೇವರ ಆಶೀರ್ವಾದ ಸದಾ ಇರುತ್ತದೆ ಎಂಬುದು ಕ್ರಿಶ್ಚಿಯನ್ನರ ಅಚಲ ನಂಬಿಕೆ.