ಸುಳ್ಯ (ದಕ್ಷಿಣ ಕನ್ನಡ):ಇಂದು ವಿಶ್ವದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಡಿ. 24 ರಂದು ರಾತ್ರಿ ಮಧ್ಯರಾತ್ರಿಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲ ಚರ್ಚ್‌ಗಳಲ್ಲಿ ಪವಿತ್ರ ದಿವ್ಯ ಬಲಿಪೂಜೆ, ಪ್ರಾರ್ಥನೆ ನಡೆಯಿತು. ವಿವಿಧ ಚರ್ಚ್ಗಳ ಉಸ್ತುವಾರಿ ಹೊಂದಿರುವ ಆಯಾ ಪ್ರದೇಶಗಳ ಬಿಷಪ್ಗಳು ಹಾಗೂ ಧರ್ಮಗುರುಗಳ ನೇತೃತ್ವದಲ್ಲಿ ಕ್ರಿಸ್ಮಸ್ ವಿಶೇಷ ಪೂಜೆಗಳು ನೆರವೇರಿದವು.
ಇಂದು ಶಾಂತಿ, ಸೌಹಾರ್ದತೆ ಸಾರುವ ಕ್ರಿಸ್ಮಸ್ ಹಬ್ಬ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದ್ಧೂರಿ ಆಚರಣೆ ಕ್ರಿಸ್ಮಸ್ಹಬ್ಬ ಆಚರಣೆಯ ಹಿನ್ನೆಲೆ: ಇಂದು ಏಸುಕ್ರಿಸ್ತ ಹುಟ್ಟಿದ ದಿನವೇ ಕ್ರಿಸ್ಮಸ್ ಹಬ್ಬ. ಈ ದಿನವನ್ನು ಕ್ರಿಸ್ತ ಜಯಂತಿ ಎಂದೂ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಪ್ರತಿ ವರ್ಷ ಡಿಸೆಂಬರ್ 25 ರಂದು ಈ ಹಬ್ಬ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕ್ರೈಸ್ತ ಧರ್ಮದ ಪವಿತ್ರ ಗ್ರಂಥ ಬೈಬಲ್ನ ಪ್ರಕಾರ ಯೇಸುಕ್ರಿಸ್ತ, ಮೇರಿ ಹಾಗೂ ಜೋಸೆಫರ ಮಗನಾಗಿ ಜೆರುಸಲೇಮ್ ಪಟ್ಟಣದ ಬೆತ್ಲಹೆಮ್ ಎಂಬ ಊರಿನಲ್ಲಿ ಜನಿಸಿದರು. ರೋಮನ್ ಜನಗಣತಿಯ ಪ್ರಕಾರ ಮೇರಿ ಹಾಗೂ ಜೋಸೆಫ್ ದಂಪತಿ ತಮ್ಮ ಹೆಸರನ್ನು ನೋಂದಾಯಿಸಲು ಹೋಗುತ್ತಿದ್ದ ವೇಳೆ ಮೇರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಲ್ಲೇ ಇದ್ದ ಗೋದಲಿಯೊಂದರಲ್ಲಿ ಆಶ್ರಯ ಪಡೆದು, ಯೇಸುಕ್ರಿಸ್ತನಿಗೆ ಜನ್ಮ ನೀಡಿದ್ದರು.
ಯಹೂದ್ಯ ಧರ್ಮದ ಪ್ರಕಾರ ಪ್ರವಾದನೆಗಳನ್ನು ನೆರವೇರಿಸಲು ಡೇವಿಡ್‌ನ ವಂಶದಲ್ಲಿ ಮಿಸಿಹಾ ಅಥವಾ ಮೆಸ್ಸಾಯ ಎನ್ನುವ ಅರ್ಥದ ದೇವರ ದೂತ, ರಕ್ಷಕ ಬರುವನೆಂಬ ನಂಬಿಕೆಯಿತ್ತು. ಈ ದೇವರ ದೂತನೇ ಯೇಸುಕ್ರಿಸ್ತ ಎಂದು ಕ್ರೈಸ್ತರು ಭಾವಿಸುತ್ತಾರೆ. ಗ್ರೀಕ್ ಲಿಪಿಯಲ್ಲಿ ಕ್ರಿಸ್ತನ ಮೊದಲ ಅಕ್ಷರವು ಇಂಗ್ಲಿಷಿನ ಎಕ್ಸ್ನಂತೆ ತೋರುವುದರಿಂದ ಕೆಲವರು ಎಕ್ಸ್ಮಸ್ ಎಂದು ಬರೆಯುತ್ತಿದ್ದರು. ಅದು ಮುಂದುವರೆದು ಕ್ರಿಸ್ಮಸ್ ಆಗಿದೆ ಎನ್ನಲಾಗಿದೆ.
ಇಂದು ಶಾಂತಿ, ಸೌಹಾರ್ದತೆ ಸಾರುವ ಕ್ರಿಸ್ಮಸ್ ಹಬ್ಬ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದ್ಧೂರಿ ಆಚರಣೆ ಕ್ರಿಸ್ಮಸ್ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಕ್ರಿಸ್ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆಯಾಗಿದೆ. ಕ್ರಿಸ್ಮಸ್ ವೃಕ್ಷಕ್ಕೆ ದೀಪಗಳು ಹಾಗೂ ಇತರ ವಸ್ತುಗಳಿಂದ ಅಲಂಕಾರ ಮಾಡಲಾಗುತ್ತದೆ. ಅನೇಕ ಕಡೆಗಳಲ್ಲಿ ಮನೆಯ ಹೊರಗಡೆ ಕ್ರಿಸ್ತನ ಜನನ ಸಮಯದಲ್ಲಿ ಗೊಲ್ಲರಿಗೆ ಮಾರ್ಗದರ್ಶಿಯಾಗಿ ಗೋಚರಿಸಿದ ನಕ್ಷತ್ರದ ಆಕೃತಿಗಳನ್ನು, ನಕ್ಷತ್ರ ದೀಪಗಳನ್ನು ಕಟ್ಟುವುದು ಪಾರಂಪರಿಕೆಯಾಗಿ ಮುಂದುವರಿದುಕೊಂಡು ಬಂದಿದೆ. ಅದಷ್ಟೇ ಅಲ್ಲದೆ ಕ್ರಿಸ್ಮಸ್ ಹಬ್ಬಕ್ಕೆ ಚರ್ಚ್ಗಳು ಹಾಗೂ ಮನೆಗಳ ಮುಂದೆ ಗೋದಲಿಗಳ ನಿರ್ಮಾಣ ಮಾಡಲಾಗುತ್ತದೆ. ಹಬ್ಬಕ್ಕೆ ಇನ್ನೇನು ಒಂದು ತಿಂಗಳ ಇರುವಾಗಲೇ ಇದರ ತಯಾರಿ ಪ್ರಾರಂಭವಾಗುತ್ತದೆ. ಇದರ ಜೊತೆಗೆ ಕ್ರಿಸ್ಮಸ್ ಪ್ರಯುಕ್ತ ಡಿಸೆಂಬರ್ ತಿಂಗಳ ಆರಂಭದಿಂದಲೇ ವೃತಾಚರಣೆ ಆರಂಭವಾಗುತ್ತದೆ. ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಮನೆ ಮನೆಗೆ ತೆರಳಿ ಕ್ರಿಸ್ಮಸ್ ಸಂದೇಶ ಸಾರುವ ಕ್ಯಾರಲ್ ಹಾಡುಗಳನ್ನು ಹಾಡಲಾಗುತ್ತದೆ.
ಈ ಆಚರಣೆಗಳು ಒಂದೆಡೆಯಾದರೆ, ಕ್ರಿಸ್ಮಸ್ ಹಬ್ಬಕ್ಕೆ ತಿಂಡಿ ತಿನಿಸುಗಳ ಗಮ್ಮತ್ತು ಇನ್ನೊಂದೆಡೆ. ಯಾಕೆಂದರೆ ಕ್ರಿಸ್ಮಸ್ ಹಬ್ಬದಲ್ಲಿ ಪೂಜೆಗಳು ಎಷ್ಟು ಮುಖ್ಯವೋ, ವೈವಿಧ್ಯಮಯವಾದ ತಿಂಡಿ ತಿನಿಸುಗಳು ಕೂಡ ಹಬ್ಬದ ಆಕರ್ಷಣೆಯಾಗಿದೆ. ಕೇಕ್ ಸೇರಿದಂತೆ ವಿಶಿಷ್ಟವಾದ ತಿನಿಸುಗಳನ್ನು ಮಾಡಿ, ಪರಸ್ಪರ ಹಂಚಿ, ತಿನ್ನಲಾಗುತ್ತದೆ. ಹಲವಾರು ಜನರು ಅನಾಥರಿಗೆ, ನಿರ್ಗತಿಕರಿಗೆ ಈ ವೇಳೆ ದಾನಧರ್ಮಗಳನ್ನು ಮಾಡುತ್ತಾರೆ. ಕ್ರಿಸ್ಮಸ್ ವೃತಾಚರಣೆ ಆರಂಭದಿಂದಲೇ ಚರ್ಚ್‌ಗಳಲ್ಲಿ ಕೆಲವು ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಕ್ರಿಸ್ಮಸ್ ಈವ್ ರಾತ್ರಿ ಅಂದರೆ ಡಿ. 24ರ ರಾತ್ರಿ ಕ್ರಿಸ್ಮಸ್ ವಿಶೇಷ ಪೂಜೆ ಹಾಗೂ ಆಚರಣೆಗಳು ನಡೆಯುತ್ತದೆ. ಡಿ. 25 ರಂದು ಕ್ರೈಸ್ತ ಧರ್ಮದವರ ಪ್ರತಿ ಮನೆಗಳಲ್ಲಿ ಆಚರಣೆಗಳು ನಡೆಯುತ್ತದೆ. ನಂತರ ಮುಂದಕ್ಕೆ ಒಂದೆರಡು ದಿನಗಳಲ್ಲಿ ಸಂಯುಕ್ತವಾಗಿ ಕ್ರಿಸ್ಮಸ್ ಆಚರಣೆ ನಡೆಯುತ್ತದೆ.
ಕ್ರಿಸ್ಮಸ್ ದಿನ ಬರುವ ಸಾಂತಾಕ್ಲಾಸ್:ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ, ಮನೆಗೆ ಬರುವ ಕ್ಯಾರಲ್ ತಂಡದೊಂದಿಗೆ ಸಾಂತಾಕ್ಲಾಸ್ ಎಂಬ ಕೆಂಪು ಉಡುಗೆ ತೊಟ್ಟ ಅಜ್ಜ ಬಂದು ಮಕ್ಕಳಿಗೆ ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ಮಸ್ ಹಬ್ಬದ ವಿಶೇಷಗಳಲ್ಲೊಂದು. ಸಂತ ನಿಕೋಲಾಸ್ ಎಂಬ ಹೆಸರು ಮುಂದೆ ಸಾಂತಾಕ್ಲಾಸ್ ಬದಲಾಗಿ, ಅದೇ ಮುಂದುವರಿಯುತ್ತಿದೆ. ಇವರನ್ನು ಕ್ರಿಸ್ಮಸ್ ಫಾದರ್, ಸೇಂಟ್ ನಿಕೋಲಸ್, ಸಿಂಟರ್ಕ್ಲಾಸ್ ಎಂದೂ ಕರೆಯುತ್ತಾರೆ. ಸಂತ ನಿಕೋಲಸ್ ಅವರು ಕ್ರಿಸ್‌ಮಸ್ ಮುನ್ನಾ ದಿನದಂದು ತನ್ನ ಊರಿನಲ್ಲಿ ಎಲ್ಲಾ ಕಡೆಗಳಲ್ಲಿ ಜಾರುಬಂಡಿಯಲ್ಲಿ ಆಟಿಕೆಗಳನ್ನು, ತಿಂಡಿಗಳನ್ನು ಲೋಡ್ ಮಾಡಿ ಮನೆಗಳಿಗೆ ತೆರಳಿ ಪ್ರತಿ ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಿದ್ದರು. ಮುಂದೆ ಈ ಸಂಪ್ರದಾಯ ಕ್ರಿಸ್ಮಸ್ ಹಬ್ಬದೊಂದಿಗೆ ಸೇರಿಕೊಂಡಿತು. ಬೇರೆ ಬಣ್ಣದ ವೇಷಧಾರಿಯಾದ ಸಾಂತಾಕ್ಲಾಸ್‌ಗೆ ತನ್ನ ಕಂಪನಿಯ ಪ್ರಚಾರಕ್ಕಾಗಿ ಕೋಕಾ ಕೋಲಾ ಕಂಪನಿಯು ಕಪ್ಪು ಬೆಲ್ಟ್ ಮತ್ತು ಬಿಳಿ ತುಪ್ಪಳ ಟ್ರಿಮ್, ಕಪ್ಪು ಬೂಟುಗಳು ಮತ್ತು ಮೃದುವಾದ ಗಡ್ಡ ಮೀಸೆ ಮತ್ತು ಕೆಂಪು ಟೋಪಿಯೊಂದಿಗೆ ಕೆಂಪು ಸೂಟ್‌ನಲ್ಲಿ ಪ್ರಚಾರ ನೀಡಿತ್ತು ಎನ್ನಲಾಗಿದೆ. ನಂತರದಲ್ಲಿ ಇದೇ ಸಾಂತಾ ವೇಷ ಮುಂದುವರೆದಿದೆ.
ಪುತ್ತೂರಿನ ಮೈದೆ ದೇವುಸ್ ಚರ್ಚ್ನಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ:ಕ್ರಿಸ್ಮಸ್ ಹಬ್ಬ ಈಗಾಗಲೇ ಎಲ್ಲಾ ಕಡೆ ಪ್ರಾರಂಭವಾಗಿದ್ದು, ಇತಿಹಾಸ ಪ್ರಸಿದ್ಧ ಪುತ್ತೂರಿನ ಮೈದೆ ದೇವುಸ್ ಚರ್ಚ್ನಲ್ಲಿ ಬಹಳ ವೈಭವದಿಂದ ನಡೆಯಿತು. ಡಿ.24 ರಂದು ರಾತ್ರಿ ಸಾವಿರಾರು ಮಂದಿ ವಿಶೇಷ ಬಲಿಪೂಜೆಯಲ್ಲಿ ಪಾಲ್ಗೊಂಡರು. ರೆವೆರೆಂಡ್ ಫಾದರ್ ಲಾರೆನ್ಸ್ ಮಸ್ಕ್ರೇರೆನಸ್ ಸಂದೇಶವನ್ನು ಸಾರಿದರು.
ಇದನ್ನೂ ಓದಿ:ಮಲೆನಾಡಲ್ಲಿ ಸಂಭ್ರಮದ ಕ್ರಿಸ್ಮಸ್: ವಿಡಿಯೋ ನೋಡಿ