ಮಂಗಳೂರು: ರಾಜ್ಯ ಸರ್ಕಾರ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕೊಂಕಣಿ ಅಕಾಡೆಮಿಯಿಂದ ಒಂದೇ ಒಂದು ಅಕಾಡೆಮಿ, ಪ್ರಾಧಿಕಾರಕ್ಕೆ ಕೊಂಕಣಿ ಕ್ರೈಸ್ತರನ್ನು ನೇಮಕ ಮಾಡದೆ ರಾಜ್ಯ ಸರ್ಕಾರ ಅನ್ಯಾಯವೆಸಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.
ಕ್ರೈಸ್ತ ಕೊಂಕಣಿಗರನ್ನು ಮೂಲೆಗುಂಪು ಮಾಡಿ ವ್ಯವಸ್ಥಿತವಾದ ಸಂಚು ರೂಪಿಸಲಾಗಿದೆ. ನನ್ನ ಸಮುದಾಯಕ್ಕೆ ಇದರಿಂದ ನೋವಾಗಿದೆ. ಇದನ್ನು ಕೂಡಲೇ ಸರಿಪಡಿಸದಿದ್ದಲ್ಲಿ ನಾನು ಓರ್ವ ಶಾಸಕನಾಗಿ ವಿಧಾನಸಭೆಯ ಮುಂದೆ ಧರಣಿ ಕೂರುತ್ತೇನೆ ಎಂದು ಎಚ್ಚರಿಕೆ ರವಾನಿಸಿದರು.
ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರಿನಲ್ಲಿದ್ದು, ಈವರೆಗೆ 9 ಅಧ್ಯಕ್ಷರು ಆಗಿದ್ದು, ಅದರಲ್ಲಿ ನಾಲ್ವರು ಕೊಂಕಣಿ ಕ್ರೈಸ್ತರೇ ಆಗಿದ್ದಾರೆ. ಕರ್ನಾಟಕದಲ್ಲಿ ಹನ್ನೊಂದು ಧರ್ಮಪ್ರಾಂತ್ಯಗಳಲ್ಲಿ ನಾಲ್ಕು ಧರ್ಮ ಪ್ರಾಂತ್ಯಗಳಲ್ಲಿ ಕೊಂಕಣಿಯೇ ಅಧಿಕೃತ ಭಾಷೆ. ಇಲ್ಲಿ ಎಲ್ಲವೂ ಕೊಂಕಣಿ ಭಾಷೆಯ ಮೂಲಕ ನೆರವೇರುತ್ತದೆ. ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ 200 ಪುಸ್ತಕಗಳಲ್ಲಿ ಕೊಂಕಣಿ ಕ್ರೈಸ್ತ ಸಾಹಿತಿಗಳ 150ರಷ್ಟು ಪುಸ್ತಕಗಳು ಪ್ರಕಟವಾಗಿವೆ. ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ. ರವಿಯವರು ಇದನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ, ಕೊಂಕಣಿ ಕ್ರೈಸ್ತರ ಭಾವನೆಗಳಿಗೆ ಸ್ಪಂದಿಸಬೇಕು. ಇಲ್ಲಿ ನನಗೆ ಸರ್ಕಾರದ ವ್ಯವಸ್ಥೆಯ ಬಗ್ಗೆ ನೋವಾಗಿದ್ದು, ನನ್ನ ಪ್ರತಿಭಟನೆ ಸರ್ಕಾರದ ವಿರುದ್ಧವೇ ಹೊರತು, ನೇಮಕವಾದವರ ವಿರುದ್ಧವಲ್ಲ ಎಂದು ಐವನ್ ಡಿಸೋಜ ಹೇಳಿದ್ರು.