ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಇಂದು ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಇತರೆಡೆಗಳಂತೆ ಮನೆ ಮನೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಕ್ರಮ ಇಲ್ಲ. ಇಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆದರೆ ಕೆಲವೇ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಗಣೇಶ ಚತುರ್ಥಿ ಪ್ರಯುಕ್ತ ಕೆಲವೊಂದು ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ. ಇದರಲ್ಲಿ ಮಂಗಳೂರಿನ ನೆಹರು ಮೈದಾನದಲ್ಲಿ, ಸಂಘನಿಕೇತನದಲ್ಲಿ, ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಬಂಟರ ಭವನದಲ್ಲಿ, ಫರಂಗಿಪೇಟೆ, ಜೆಪ್ಪಿನಮೊಗರು ಸೇರಿದಂತೆ ಹಲವೆಡೆ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ. ಇಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಕೆಲವೆಡೆ ನಿನ್ನೆ ಸಂಜೆಯ ವೇಳೆಗೆ, ಕೆಲವೆಡೆ ಇಂದು ಮುಂಜಾನೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇಂದು ಮುಂಜಾನೆಯಿಂದಲೇ ಪೂಜೆ ಪುನಸ್ಕಾರ ಆರಂಭವಾಗಿದ್ದು, ಕೆಲವೆಡೆ ಇಂದು ರಾತ್ರಿ, ಕೆಲವೆಡೆ ಮೂರನೇ ದಿನಕ್ಕೆ ಗಣೇಶ ಮೂರ್ತಿಯ ನಿಮಜ್ಜನ ಮಾಡಲಾಗುತ್ತದೆ.
ಇನ್ನು ಸಾರ್ವಜನಿಕರು ಗಣೇಶ ಚತುರ್ಥಿ ಪ್ರಯುಕ್ತ ಸಾರ್ವಜನಿಕ ಗಣೇಶೋತ್ಸವಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲಿ ದೇವರ ಫೋಟೋಗಳನ್ನು ಹೂವುಗಳಿಂದ ಸಿಂಗರಿಸಿ ಕಬ್ಬನ್ನು ಕಟ್ಟಿ ಹಬ್ಬದಡುಗೆ ಮಾಡಿ ಸಂಭ್ರಮಿಸುತ್ತಾರೆ.
ಕರಾವಳಿಯಲ್ಲಿ ವಿಶೇಷ ಈ ತೆನೆ ಹಬ್ಬ:ಗಣೇಶ ಚತುರ್ಥಿಗೆ ಕೆಲವೆಡೆ ತೆನೆ ಹಬ್ಬ ಆಚರಿಸುತ್ತಾರೆ. ಈ ಋತುವಿನ ಹೊಸ ತೆನೆಯಲ್ಲಿ ಊಟ ಮಾಡುವ ಈ ಹಬ್ಬವನ್ನು ಆಚರಿಸಲು ಪುದ್ದರ್ ಎಂಬ ಹಬ್ಬ ಇದ್ದರೂ ಹೆಚ್ಚಿನವರು ಗಣೇಶ ಚತುರ್ಥಿ ದಿನವೇ ತೆನೆಹಬ್ಬ ಆಚರಿಸುತ್ತಾರೆ. ಸಾರ್ವಜನಿಕ ಗಣೇಶೋತ್ಸವ ನಡೆಯುವ ಸ್ಥಳದಲ್ಲಿ ಮತ್ತು ದೇವಸ್ಥಾನಗಳಲ್ಲಿ ಭಕ್ತರಿಗೆ ತೆನೆಯನ್ನು ವಿತರಿಸಲಾಗುತ್ತದೆ.
ತೆನೆ ಹಬ್ಬದ ಕ್ರಮ:ತೆನೆ ಹಬ್ಬದ ('ಕುರಲ್‌ಪರ್ಬ') ದಿನ ಬೆಳಗ್ಗೆಯೇ ಹೆಂಗಸರು ಮನೆಯನ್ನು ಸಾರಿಸಿ ಶುದ್ಧಗೊಳಿಸುತ್ತಾರೆ. ಮನೆಯ ಯಜಮಾನ ಸ್ನಾನಮಾಡಿ ಮಡಿಯುಟ್ಟು ಗದ್ದೆಗೆ ಹೋಗಿ ತೆನೆಯನ್ನು ಒಂದು 'ಸೂಡಿ'ಯಷ್ಟು ಕಿತ್ತು ತುದಿ ಬಾಳೆಎಲೆಯಲ್ಲಿಟ್ಟು ತಲೆಯಲ್ಲಿ ಹೊತ್ತು ತರುತ್ತಾನೆ. ಕೆಲವೊಮ್ಮೆ ತೆನೆಯನ್ನು ಮುಂಚಿನ ದಿನ ಸಾಯಂಕಾಲವೇ ತರುವುದೂ ಉಂಟು. ಹಾಗೆ ತಂದು ಬಾವಿಯ ದಂಡೆ, ಇಲ್ಲವೇ ತುಳಸಿ ಕಟ್ಟೆಯ ಬಳಿಯಲ್ಲಿಯೋ ಇಡಲಾಗುತ್ತದೆ. ಹಾಲು ಬರುವ ಮರದಡಿಯಲ್ಲಿ ತೆನೆಯನ್ನು ಇಡಬೇಕೆಂಬ ನಂಬಿಕೆಯೂ ಇದೆ. ಅದರಂತೆ ಮನೆಯ ಆವರಣದೊಳಗಿರುವ ಹಲಸಿನ ಮರದಡಿಯಲ್ಲೂ ಸಂಗ್ರಹಿಸಿಡುತ್ತಾರೆ.
ಅದರೊಂದಿಗೆ ಮಾವಿನತುದಿ, ಹಲಸಿನತುದಿ, ಗರಿಕೆಹುಲ್ಲು, 'ಪಚ್ಚೆಕುರಲ್', 'ದಡ್ಡಲ್ ಮರದ ಎಲೆ', 'ಇಟ್ಟೆವು', ಅಶ್ವತ್ಥ, ಅತ್ತಿ, ಇತ್ತಿ, 'ಬಲಿಪಬಳ್ಳಿ', 'ಗೋಳಿ', ಹೂವು ಸಹಿತವಾದ ಸೌತೆ ಮಿಡಿ, ಬಿದಿರುಸೊಪ್ಪು, ತುಳಸಿ, ಗೌರಿಹೂವು, ಗಂಧ, ಕುಂಕುಮ ಇತ್ಯಾದಿಗಳನ್ನು ಸಂಗ್ರಹಿಸಿ ಇಡುತ್ತಾರೆ. ಹೀಗೆ ಎಲ್ಲಾ ವಸ್ತುಗಳನ್ನು ಜೋಡಿಸಿ ಇಡುತ್ತಾರೆ. ಯಜಮಾನ ಆ ವಸ್ತುಗಳಿಗೆ ಧೂಪ ಆರತಿ ಮಾಡಿ ಅವುಗಳನ್ನು ಶುದ್ಧಗೊಳಿಸುತ್ತಾನೆ. ನಂತರ ಅವುಗಳನ್ನೆಲ್ಲ ಮನೆಯೊಳಗೆ ತರುವಾಗ ಯಜಮಾನ ತೆನೆಗಳನ್ನು ಹಿಡಿದು ಮುಂದುಗಡೆಯಿಂದಲೂ, ಉಳಿದವರು ಉಳಿದ ವಸ್ತುಗಳನ್ನು ಹಿಡಿದುಕೊಂಡು ಆತನನ್ನು ಹಿಂಬಾಲಿಸುತ್ತಾರೆ. ಆಗ ಎಲ್ಲರೂ 'ಪೊಲಿ ಪೊಲಿ ಪೊಲಿ' ಎಂದು ಹೇಳುತ್ತಾ ತುಳಸಿಕಟ್ಟೆಗೆ ಒಂದು ಸುತ್ತು ಪ್ರದಕ್ಷಿಣೆ ಬಂದು ಮನೆಯೊಳಗೆ ಪ್ರವೇಶಿಸುತ್ತಾರೆ.